ತುರ್ತು ಔಷಧಿಯತ್ತ ವೈದ್ಯಕೀಯ ವಿದ್ಯಾರ್ಥಿಗಳು ಗಮನ ಹರಿಸಲಿ

ಬೆಂಗಳೂರು, ಸೆ.೨೩- ತುರ್ತು ಔಷಧ ವಿಭಾಗದ ಮಹತ್ವ ಏನೆಂಬುದು ಕೋವಿಡ್ ಸಂದರ್ಭದಲ್ಲಿ ಅರ್ಥವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿವಹಿಸಿ ತರಬೇತಿ ತಪಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿಂದು ವೈದೇಹಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ೩ನೇ ವಾರ್ಷಿಕ ರಾಜ್ಯಮಟ್ಟದ ತುರ್ತು ಔಷಧ ಸಮ್ಮೇಳನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ತುರ್ತು ಔಷಧ ವಿಭಾಗ ವೈದ್ಯಕೀಯ ಕ್ಷೇತ್ರದಲ್ಲಿಯೇ ಅತ್ಯಂತ ಮುಖ್ಯವಾದದು.

ಸಾವು ಮತ್ತು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ರೋಗಿಗೆ ಮರುಜೀವ ನೀಡಬಹುದಾಗಿದೆ. ಈ ಪರಿಸ್ಥಿತಿ ಕೋವಿಡ್ ಸಂದರ್ಭದಲ್ಲಿ ಅನುಭವಕ್ಕೆ ಬಂದಿದೆ. ಈಗಗಾಲೇ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತುರ್ತು ಔಷಧ ವಿಭಾಗವಿದೆ. ಅದರ ಗುಣಮಟ್ಟ ಮತ್ತು ವೈದ್ಯರಿಗೆ ಹೆಚ್ಚಿನ ತರಬೇತಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವೈದೇಹಿ ಸಂಸ್ಥೆಯಲ್ಲಿ ಸಿದ್ಧವಾಗಿರುವ ವೈದೇಹಿ ಅಡ್ವಾನ್ಸ್ಡ್ ಸಿಮ್ಯೂಲೇಷನ್ ಅಕಾಡೆಮಿ ಏಷ್ಯಾದಲ್ಲಿಯೇ ಪ್ರಥಮ ಸುಸಜ್ಜಿತವಾದ ಕೇಂದ್ರವಾಗಿದೆ. ಹೆಚ್ಚು ವೃತ್ತಿಪರತೆಯಿಂದ ಕೂಡಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಇಲಾಖೆಯಲ್ಲಿ ಸುಧಾರಣೆ ತರಲಾಗುವುದು ಎಂದು ಹೇಳಿದರು.

ತುರ್ತು ಔಷಧದಲ್ಲಿ ತರಬೇತಿಯ ಜೊತೆಗೆ ಚರ್ಚೆ, ಸಂವಾದ, ಸಂಶೋಧನೆ ಮೂಲಕ ಹೆಚ್ಚು-ಹೆಚ್ಚು ತಿಳಿದುಕೊಳ್ಳಬೇಕು. ವೈದೇಹಿ ಆಸ್ಪತ್ರೆಯಲ್ಲಿರುವ ತುರ್ತು ಔಷಧ ವಿಭಾಗದ ಪ್ರಯೋಗಲಯ ಏಷ್ಯಾದಲ್ಲೇ ಮೊದಲು ಎಂದು ಭಾವಿಸಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಗಣನೀಯ ಸಾಧನೆಗಳು ಆಗಬೇಕಿದೆ ಎಂದು ಹೇಳಿದರು.

ವೈದೇಹಿ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಕಲ್ಪಜಾ ಡಿ.ಎ. ಮಾತನಾಡಿ, ತುರ್ತು ಔಷಧ ವಿಭಾಗದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಕೋವಿಡ್ ಸಂದರ್ಭದಲ್ಲಿ ಎಮೆರ್ಜೆನ್ಸಿ ಮೆಡಿಸಿನ್ ಬಗ್ಗೆ ಸಾಕಷ್ಟು ಅರ್ಥವಾಗಿದೆ. ಎಮೆರ್ಜಿನ್ಸ ಮೆಡಿಸಿನ್ ನ ಪ್ರಾಮುಖ್ಯತೆಯನ್ನು ಹರಿತು ಎಲ್ಲಾ ಆಸ್ಪತ್ರೆಗಳನ್ನು ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಮ್ಸ್ ಮತ್ತು ಆರ್‌ಸಿ ಸಲಹೆಗಾರ ಡಾ. ಮಹೇಶ್ ಕೊತ್ತಪಲ್ಲಿ ಮಾತನಾಡಿ, ಇತ್ತೀಚೆಗೆ ತುರ್ತು ಔಷಧ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಪ್ರತಿ ನಗರದಲ್ಲಿ ೩ ಲೆವೆಲ್ ಟ್ರಾಮಾ ಕೇಂದ್ರಗಳಿರಬೇಕು. ಎಮೆರ್ಜೆನ್ಸಿ ರೋಗಿಯನ್ನು ಸಾಮಾನ್ಯ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಒಳಪಡಿಸಿದಾಗ, ಸೂಕ್ತ ಚಿಕಿತ್ಸೆ ದೊರೆಯದೆ ಆತನ ಸ್ಥಿತಿ ಮತ್ತಷ್ಟು ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತುರ್ತು ಔಷಧ ವಿಭಾಗದ ಕಲಿಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕಿದೆ ಎಂದು ಹೇಳಿದರು.

ಇಎಮ್- ಕರ್ನಾಟಕ ರಾಜ್ಯಾದ್ಯಂತದ ತುರ್ತು ಚಿಕಿತ್ಸಕರನ್ನು ಒಳಗೊಂಡಿರುವ ಒಂದು ಅಂಗವಾಗಿದೆ. ತುರ್ತು ಔಷಧ ಒಂದು ವಿಶೇಷತೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜೊತೆಗೆ ಪ್ರತಿ ವರ್ಷ ಇಎಂ-ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್.ಜಿ.ಯು.ಹೆಚ್.ಎಸ್ ನ ಮಾಜಿ ಮೊದಲ ಉಪಕುಲಪತಿ ಡಾ.ಕಾಂತ ಎಸ್, ವೈದ್ಯಕೀಯ ತಜ್ಞರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.