ತುರ್ತು ಅಧಿವೇಶನಕ್ಕೆ ಎಚ್ ಡಿ‌ಕೆ ಆಗ್ರಹ

ರಾಮನಗರ,ಆ.2- ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ‌‌ ಒತ್ತಾಯಿಸಿದ್ದಾರೆ.
ರಾಮನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಜುಲೈ ತಿಂಗಳಿನಲ್ಲಿ ಅಧಿವೇಶನ ನಡೆಯಬೇಕಾಗಿತ್ತು. ಆದರೆ ನಡೆಯಲಿಲ್ಲ. ಈಗಲಾದರು ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು.
ರಾಜ್ದದ ಕರಾವಳಿ ಭಾಗದಲ್ಲಿ ಸರಣಿ ಹತ್ಯೆಗಳು ನಡೆದಿವೆ. ಅದೇ ರೀತಿ ಹಲವೆಡೆ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕರಾವಳಿಯಲ್ಲಿ ನಡೆದ ಸರಣಿ ಕೊಲೆಗಳ ಹಿಂದೆ ಪೊಲೀಸ್ ಹಾಗೂ ಗೃಹ ಇಲಾಖೆ ವೈಫಲ್ಕ ಎದ್ದು ಕಾಣುತ್ತಿದೆ. ಮನಸ್ಸು ಮಾಡಿದ್ದರೆ ಈ ಹತ್ಯೆಗಳು ತಡೆಯಬಹುದಾಗಿತ್ತು. ಇನ್ನೊಂದಷ್ಟು ಹೆಣ ಬೀಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರಬೇಕು ಎಂದು ಕಿಡಿಕಾರಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಕಳಪೆಯಿಂದಾಗಿ ಕೆಲವೆಡೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಆದರೆ ಸಂಸದ ಪ್ರತಾಪ್ ಸಿಂಹ ಅವರು ತೆಗೆಸಿಕೊಂಡು ಗುರುವಿನ ಪರಂಪರೆ ಮುಂದುವರೆಸಿದ್ದಾರೆ ಎಂದು ಲೇವಡಿ ಮಾಡಿದರು.