ತುರ್ತುಸೇವೆಗೆ ಹೆಚ್ಚಿನ ನಿಗಾ: ಶಾಸಕರ ಸೂಚನೆ

ಸರ್ಕಾರಿ-ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳ ಸಭೆ

ಪುತ್ತೂರು, ಎ.೨೫- ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತುರ್ತು ಸೇವೆಗಳನ್ನು ಒದಗಿಸಲು ಅಧಿಕಾರಿಗಳು ಮತ್ತು ವೈದ್ಯರು ಹೆಚ್ಚಿನ ನಿಗಾ ವಹಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಪುತ್ತೂರಿನ ತಾಪಂ ಸಭಾಂಗಣದಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುತ್ತೂರು ತಾಲೂಕಿನಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿಯೂ ಚಿಕಿತ್ಸಾ ವ್ಯವಸ್ಥೆ ಮಾಡಲಾಗುವುದು. ಬೆಂಗೂರಿನ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗದಂತೆ ನಾವು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕಾಗಿದೆ. ಒಂದು ವೇಳೆ ಅಂತಹ ಸ್ಥಿತಿ ನಿರ್ಮಾಣವಾದರೆ ಅದಕ್ಕೂ ನಾವು ಸಿದ್ಧರಾಗಬೇಕಾಗುತ್ತದೆ ಎಂದು ಅವರು ಹೇಳಿದರು.

ಕೊರೊನಾ ಪೀಡಿತ ಸಂಖ್ಯೆಯಲ್ಲಿ ಪ್ರಸ್ತುತ ಏರುಮುಖ ಕಾಣಿಸಿಕೊಳ್ಳುತ್ತಿದೆ. ಕಳೆದ ಕೊರೊನಾ ಸಮಯದಲ್ಲೂ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬಂದಿಗಳು ಸಹಕಾರ ನೀಡಿದ್ದೀರಿ. ಅನಿವಾರ್ಯವಾದರೆ ಮತ್ತೆ ನಿಮ್ಮ ಸಹಕಾರ ನೀಡಬೇಕು ಎಂದು ಶಾಸಕರು ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿ ಮನವಿ ಮಾಡಿದರು.

ಡೆಂಗ್ಯು-ಮಲೇರಿಯಾ

ಕೊರೊನಾ ಅಟ್ಟಹಾಸದ ನಡುವೆ ತಾಲೂಕಿನಲ್ಲಿ ಡೆಂಗ್ಯು ಹಾಗೂ ಮಲೇರಿಯಾ ಜ್ವರದ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ತುರ್ತು ಅವಶ್ಯಕತೆಗಾಗಿ ರಕ್ತ ಅನಿವಾರ್ಯವಾಗುವ ಸ್ಥಿತಿಯೂ ನಿರ್ಮಾಣವಾಗಬಹುದು. ಮುನ್ನೆಚ್ಚರಿಕೆಯ ಹಿನ್ನಲೆಯಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವಂತೆ ರೋಟರಿಕ್ಲಬ್, ಜೇಸಿಐ ಮತ್ತಿತರ ಸಾಮಾಜಿಕ ಸಂಘಟಗಳಿಗೆ ಮನವಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಮೊದಲ ಹಂತದಲ್ಲಿ ಕೊರೊನಾ ಲಸಿಕೆ ವಿತರಣೆ ನಡೆಸಲಾಗಿದೆ. ಈಗ ಎರಡನೇ ಹಂತದಲ್ಲಿ ಸಾಕಷ್ಟು ಬೇಡಿಕೆ ಜನರಿಂದ ವ್ಯಕ್ತವಾಗುತ್ತಿದೆ. ಆದರೆ ಲಸಿಕೆಯ ಕೊರತೆ ಇದೆ ಎಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ  ವೈದ್ಯಾಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಆದರೆ ಪ್ರಸ್ತುತ ಪುತ್ತೂರಿನಲ್ಲಿ ಆಮ್ಲಜನಕದ ಕೊರತೆ ಇಲ್ಲ ಎಂದು ವೈದ್ಯರು ತಿಳಿಸಿದರು. ಈ ಬಗ್ಗೆ ಶಾಸಕರು ಮಾತನಾಡಿ, ಆಮ್ಲಜನಕದ ಕೊರತೆ ಇದ್ದರೆ ತಕ್ಷಣ ತಾಲೂಕು ಆರೋಗ್ಯಾಧಿಕಾರಿ ಅವರ ಗಮನಕ್ಕೆ ತರಬೇಕು. ವ್ಯವಸ್ಥೆ ಮಾಡಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ೨೬ ಕೋವಿಡ್ ಹಾಗೂ ೨೬ ಇತರ ಬೆಡ್ ವ್ಯವಸ್ಥೆ ಇದೆ. ೩ ಡಬ್ಬಲ್ ಆಕ್ಸಿಜನ್ ಸಿಲಿಂಡರ್ ಸಂಗ್ರಹ ಇದೆ. ೪ ವೆಂಟಿಲೇಟರ್ ವ್ಯವಸ್ಥೆ ಇದೆ. ಆದರೆ ವೈದ್ಯಾಧಿಕಾರಿಗಳ ಕೊರತೆ ಇದೆ. ಲಸಿಕೆಯ ಕೊರತೆಯೂ ಇದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ತಿಳಿಸಿದರು.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ೨೬ ಬೆಡ್, ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ಬೆಡ್ ಸೇರಿದಂತೆ ತಾಲೂಕಿನಲ್ಲಿ ಒಟ್ಟು ೬೬ ಬೆಡ್ ಕೊರೊನಾ ಚಿಕಿತ್ಸೆಗೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ತಿಳಿಸಿದರು.

ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ. ಪೌರಾಯುಕ್ತೆ ರೂಪಾಶೆಟ್ಟಿ, ಡಿವೈಎಸ್ಪಿ ಗಾನಾ ಪಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.