
ತಿಪಟೂರು, ಜು. ೨೬- ತುಮಕೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ಪ್ರೊ. ವೆಂಕಟೇಶ್ವರಲು ಅಧಿಕಾರ ವಹಿಸಿಕೊಂಡಿರುವುದು ಸ್ವಾಗತಾರ್ಹ ಎಂದು ತುಮಕೂರು ವಿ.ವಿ ಮಾಜಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಕೆ.ಎಸ್.ಸದಾಶಿವಯ್ಯ ಹೇಳಿದರು.
ತುಮಕೂರು ವಿ.ವಿ.ಯಲ್ಲಿ ನೂತನ ಕುಲಪತಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಕುಲಸಚಿವರಾಗಿ ಈ ಹಿಂದೆ ಪ್ರೊ. ರಾಜಾಸಾಬ್ರವರು ಕುಲಪತಿಗಳಾಗಿದ್ದಾಗ ಪ್ರೊ. ವೆಂಕಟೇಶ್ವರಲು ಕಾರ್ಯನಿರ್ವಹಿಸಿದ್ದು ಅವರಿಗೆ ತುಮಕೂರು ವಿ.ವಿ. ಆಡಳಿತದ ಪರಿಚಯ ಈಗಾಗಲೇ ಆಗಿದ್ದು ನೆನೆಗುದಿಗೆ ಬಿದ್ದಿರುವ ತುಮಕೂರು ವಿ.ವಿ ಕ್ಯಾಂಪಸ್ ಪೂರ್ಣಗೊಳಿಸುವುದರ ಜತೆಗೆ ತಿಪಟೂರಿನ ಕಲ್ಪಸಿರಿ ವಿ.ವಿ ಸ್ನಾತಕೋತ್ತರ ಅಭಿವೃದ್ಧಿಪಡಿಸುವುದು, ಸಿರಾ ಸ್ನಾತಕೋತ್ತರ ಅಭಿವೃದ್ಧಿ ಕೇಂದ್ರ ಅಭಿವೃದ್ಧಿಪಡಿಸುವುದರ ಜತೆಗೆ ವಿ.ವಿ. ಶೈಕ್ಷಣಿಕ ಗುಣಮಟ್ಟ ಸೇರಿದಂತೆ ಜಿಲ್ಲೆಯ ಅಭಿವ್ಯಕ್ತಿಗೆ ಪೂರಕವಾಗಿ ಆಡಳಿತ ಸಮನ್ವಯದೊಂದಿಗೆ ವಿ.ವಿ.ಯನ್ನು ಬೆಳೆಸುವ ಹೊಣೆಗಾರಿಕೆ ನೂತನ ಕಲಪತಿಗಳ ಮೇಲೆ ಇದ್ದು ದೇಶದಲ್ಲೆ ಮಾದರಿ ವಿಶ್ವವಿದ್ಯಾನಿಲಯವನ್ನಾಗಿ ಮಾರ್ಪಡಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಾಪಣ್ಣ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಸಿರಾ ನಾಗಣ್ಣ, ತಿಪಟೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ, ಕೆ.ಎಸ್.ದೇವರಾಜು, ತುಮಕೂರು ಪ್ರತಿನಿಧಿ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.