ತುಮಕೂರು ಲೋಕಸಭೆ ಬಿಜೆಪಿ ಟಿಕೆಟ್ ಮೇಲೆ ಸೋಮಣ್ಣ ಕಣ್ಣು

ತುಮಕೂರು, ಫೆ. ೧೮- ಇನ್ನು ಬೇಸಿಗೆ ಆರಂಭಕ್ಕೆ ಮುನ್ನವೇ ಬಿಸಿಲಿನ ಕಾವು ಏರುತ್ತಿರುವಂತೆಯೇ ಲೋಕಸಭಾ ಚುನಾವಣೆಯ ಕಾವು ಸಹ ರಂಗೇರುತ್ತಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ. ಈ ಬೆನ್ನಲ್ಲೆ ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಹಾಗೂ ಪ್ರಬಲ ನಾಯಕ ವಿ. ಸೋಮಣ್ಣ ಅವರು ಈಗಾಗಲೇ ಕ್ಷೇತ್ರದಲ್ಲಿ ಮಠಗಳ ಭೇಟಿಯತ್ತ ಚಿತ್ತ ಹರಿಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಮಾಜಿ ಸಚಿವ ವಿ. ಸೋಮಣ್ಣನವರು ಶತಾಯ-ಗತಾಯ ಬಿಜೆಪಿ ಟಿಕೆಟ್ ಪಡೆದು ತುಮಕೂರು ಕ್ಷೇತ್ರದಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಹಠಕ್ಕೆ ಬಿದ್ದವರಂತೆ ಮಠಾಧೀಶರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.
ಜಿಲ್ಲೆಯ ಕೊರಟಗೆರೆ ತಾಲ್ಲೂಕು ಎಲೆರಾಂಪುರ ಕುಂಚಿಟಿಗರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ಇದಾದ ಬಳಿಗ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕೆಲಹೊತ್ತು ಚರ್ಚೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ ಅವರು, ರಾಜ್ಯಸಭೆಗೆ ಅವಕಾಶ ಕೇಳಿದ್ದೆ. ಅಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿದ್ದರಿಂದ ಸಾಧ್ಯವಾಗಿಲ್ಲ. ಹೈಕಮಾಂಡ್ ಅವಕಾಶ ಕೊಟ್ಟರೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ತುಮಕೂರು ಬಿಟ್ಟು ಬೇರೆಡೆ ಸ್ಪರ್ಧೆ ಮಾಡುವಂತೆ ಹೇಳಿದರೆ ಅದಕ್ಕೂ ತಯಾರಿದ್ದೇನೆ ಎಂದರು.ಸೋಮಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಾಧುಸ್ವಾಮಿ ಹಿರಿಯ ನಾಯಕರು. ಸ್ಥಳೀಯರು, ಮತ್ತೊಬ್ಬರು ಎಂಬುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಬಿಟ್ಟು ಬೇರೆಡೆ ನಿಲ್ಲಲಿಲ್ಲವೆ ಎಂದು ಪ್ರಶ್ನಿಸಿದರು.ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನು ಎಲ್ಲಿಗೆ ಕರೆಸಿಕೊಳ್ಳಬೇಕು, ಎಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಕಳೆದ ಬಾರಿ ಜಿ.ಎಸ್.ಬಸವರಾಜು ಚುನಾವಣೆಗೆ ಸ್ಪರ್ಧಿಸಿದಾಗ ನಾನೇ ಉಸ್ತುವಾರಿ ಇದ್ದೆ. ಜಿಲ್ಲೆಯ ಒಂದು ಸಾವಿರ ಹಳ್ಳಿ ಹೆಸರು ಹೇಳಬಲ್ಲೆ. ಸಾವಿರಾರು ಜನರು ಗೊತ್ತಿದ್ದಾರೆ ಎನ್ನುವ ಮೂಲಕ ಸ್ಪರ್ಧೆಗೆ ವಿರೋಧಿಸುವವರಿಗೆ ತಿರುಗೇಟು ನೀಡಿದರು.
ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದು ಒಬ್ಬ ಸೋಮಣ್ಣನಿಂದ ಮಾತ್ರ ಸಾಧ್ಯ. ಇದು ಎಲ್ಲರ ಕೈಯಲ್ಲೂ ಸಾಧ್ಯವಿಲ್ಲ. ನಾನು ಗೆದ್ದಿದ್ದರೆ ಏನಾಗುತ್ತಿದ್ದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ನಾನೊಬ್ಬ ಕೆಲಸಗಾರ. ಹಗ್ಗದಲ್ಲಿ ಕಟ್ಟಿಹಾಕಿ ಕೂರಿಸಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದರು.
ಬಿಜೆಪಿ? ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ತುಮಕೂರು ಕ್ಷೇತ್ರ ಯಾರಿಗೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಈಗಾಗಲೇ ನಿರ್ಧರಿಸಿದೆ ಎಂದು ಅವರು ಹೇಳಿದರು.