ತುಮಕೂರು ಪಾಲಿಕೆ: ೨೫೦.೬೬ ಲಕ್ಷ ರೂ. ಉಳಿತಾಯ ಬಜೆಟ್

ತುಮಕೂರು, ಏ. ೯- ತುಮಕೂರು ಮಹಾನಗರ ಪಾಲಿಕೆಯು ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ೨೦೨೧-೨೨ನೇ ಸಾಲಿನಲ್ಲಿ ೨೫೦.೬೬ ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದೆ.
ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ನಗರ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಪ್ರಸಕ್ತ ಸಾಲಿನಲ್ಲಿ ಆರಂಭಿಕ ಶಿಲ್ಕು ೨೦೯೧.೪೫ ಲಕ್ಷ ರೂ., ಅಂದಾಜು ಸ್ವೀಕೃತಿ ೨೦೯೦೪.೬೫ ಲಕ್ಷ ರೂ., ಒಟ್ಟು ಅಂದಾಜು ಸ್ವೀಕೃತಿಗಳು ೨೨೯೯೬.೧೦ ಲಕ್ಷ ರೂ., ಅಂದಾಜು ವೆಚ್ಚಗಳು ೨೨೭೪೫.೪೪ ಲಕ್ಷ ರೂ. ಸೇರಿ ಒಟ್ಟು ೨೫೦.೬೬ ಲಕ್ಷ ರೂ.ಗಳ ಉಳಿತಾಯ ಆಯವ್ಯಯವನ್ನು ಇಂದು ಮಂಡಿಸಿತು.
ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ನಡೆದ ೨೦೨೧-೨೨ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ಬಜೆಟ್ ಮಂಡಿಸಿದ ತೆರಿಗೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನ ಇಂದ್ರಕುಮಾರ್ ಅವರು ಮಾತನಾಡಿ, ನಾಗರಿಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಉತ್ತಮ ಆರೋಗ್ಯ, ಬೀದಿ ದೀಪ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿ ಮಾಡುವ ಮೂಲಕ ಸ್ವಚ್ಚ ಮತ್ತು ಹಸಿರು ತುಮಕೂರು ನಿರ್ಮಾಣಕ್ಕೆ ೨೦೨೧-೨೨ನೇ ಸಾಲಿನ ಆಯವ್ಯಯದಲ್ಲಿ ಆದ್ಯತೆ ನೀಡಲಾಗಿದೆ ಎಂದರು.
ನಗರದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಉತ್ತಮ ಸಾರಿಗೆ, ಸಿ.ಸಿ. ಟಿವಿಗಳ ಅಳವಡಿಕೆ, ೨೪x೭ ನೀರಿನ ಸೌಲಭ್ಯ ಗ್ಯಾಸ್‌ಲೈನ್‌ಗಳ ಜೋಡಣೆ ಸೇರಿದಂತೆ ಇನ್ನು ಅನೇಕ ಸಾರ್ವಜನಿಕ ಸಹಭಾಗಿತ್ವದ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರು-ಪತ್ರಕರ್ತರಿಗೆ ಆರೋಗ್ಯ ಕೇಂದ್ರ ಸ್ಥಾಪನೆ ಮಹಾನಗರ ಪಾಲಿಕೆಯ ಎಲ್ಲಾ ಕಾರ್ಮಿಕರ ಆರೋಗ್ಯ ಕಾಪಾಡಲು ಪಾಲಿಕೆಯ ಆವರಣದಲ್ಲಿ ಒಂದು ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಕ್ರಮ ವಹಿಸಲಾಗುವುದು. ಈ ಕೇಂದ್ರದಲ್ಲಿ ಪತ್ರಕರ್ತರಿಗೂ ಸಹ ಉಚಿತವಾಗಿ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಒಟ್ಟು ೧೫ ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆ ಪ್ರಸ್ತುತ ಆರ್ಥಿಕ ಸಾಲಿನ ಆಯವ್ಯಯದಲ್ಲಿ ೨೦೦ ಲಕ್ಷ ರೂ.ಗಳನ್ನು ಇಂದಿರಾ ಕ್ಯಾಂಟೀನ್ ನಿರ್ವಹಣೆಗಾಗಿ ಕಾಯ್ದಿರಿಸಲಾಗಿದೆ.
ವೈಜ್ಞಾನಿಕ ಕಸ ವಿಲೇವಾರಿ ಘನತ್ಯಾಜ್ಯ ವಿಲೇವಾರಿಗಾಗಿ ರಾಜಸ್ವ ವೆಚ್ಚ ೨೯೩೦ ಲಕ್ಷ ರೂ. ಮತ್ತು ಬಂಡವಾಳ ವೆಚ್ಚ ೧೦೦೫ ಲಕ್ಷ ರೂ. ಸೇರಿ ಒಟ್ಟು ೩೯೩೫ ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಬಂಡವಾಳ ವೆಚ್ಚದಡಿಯಲ್ಲಿ ಕಸ ವಿಲೇವಾರಿ ಘಟಕದಲ್ಲಿ ರೂ.೮೫೦ ಲಕ್ಷಗಳಲ್ಲಿ ಪ್ರತಿ ನಿತ್ಯ ೧೦೦ ಟನ್ ಕಸ ಸಂಸ್ಕರಣಾ ಘಟಕ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ದಿಬ್ಬೂರು ಬಳಿಯ ೨ ಎಕರೆ ಜಾಗದಲ್ಲಿ ಜಿ+೨ ಮಾದರಿಯಲ್ಲಿ ೫೨ ಮನೆಗಳ ನಿರ್ಮಾಣಕ್ಕಾಗಿ ಗೃಹ ಭಾಗ್ಯ ಯೋಜನೆಯಡಿಯಲ್ಲಿ ೧೫೦ ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಈ ಕಾಮಗಾರಿಯನ್ನು ೨೦೨೧-೨೨ನೇ ಸಾಲಿನಲ್ಲಿ ನಿರ್ವಹಿಸಿ ಪೂರ್ಣಗೊಳಿಸಲಾಗುವುದು ಎಂದು ಅವರು ಬಜೆಟ್ ಮಂಡಿಸುತ್ತಾ ತಿಳಿಸಿದರು.
ಬಜೆಟ್ ಮಂಡನಾ ಸಭೆಯಲ್ಲಿ ಮೇಯರ್ ಬಿ.ಜಿ. ಕೃಷ್ಣಪ್ಪ, ಉಪಮೇಯರ್ ನಾಜಿಮಾಭೀ, ಆಯುಕ್ತೆ ರೇಣುಕಾ ಸೇರಿದಂತೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಪಾಲಿಕೆ ಸದಸ್ಯರುಗಳು ಭಾಗವಹಿಸಿದ್ದರು.