ತುಮಕೂರು ಅಭಿವೃದ್ದಿಗಾಗಿ ಚುನಾಯಿತ ಮಂಡಳಿಗೆ ಸಹಕರಿಸಲು ಸಲಹೆ

ತುಮಕೂರು, ನ. ೨೦- ನಗರದ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಪಾಲಿಕೆಗೆ ನಾಮನಿರ್ದೇಶನ ಮಾಡಿರುವ ಸದಸ್ಯರು ನಡೆದುಕೊಳ್ಳುವಂತೆ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ.
ನಗರದ ಪಾಲಿಕೆ ಸಭಾಂಗಣದಲ್ಲಿ ಸರ್ಕಾರದ ವತಿಯಿಂದ ಪಾಲಿಕೆಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಮೋಹನ್ ಡಿ.ಎ., ಶಿವರಾಜು ಕೆ.ಎನ್.ನರಸಿಂಹಸ್ವಾಮಿ, ತ್ಯಾಗರಾಜಸ್ವಾಮಿ, ವಿಶ್ವನಾಥ್ ಟಿ.ವಿ. ರವರಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಮನಿರ್ದೇಶನ ಸದಸ್ಯರಿಗೆ ಇಂತಹದ್ದೇ ವಾರ್ಡುಗಳೆಂಬುದಿಲ್ಲ. ನಗರದ ೩೫ ವಾರ್ಡುಗಳಲ್ಲಿಯೂ ಕೆಲಸ ಮಾಡಲು ಅವಕಾಶವಿದೆ. ಆದರೆ ಹಾಲಿ ಸದಸ್ಯರ ಜತೆ ಜಿದ್ದಾಜಿದ್ದಿಗೆ ಬೀಳದೆ, ಅವರಿಗೆ ಪೂರಕವಾಗಿ ಕೆಲಸ ಮಾಡುವ ಮೂಲಕ ನಗರದಲ್ಲಿ ಉದ್ಬವಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಲು ಸಹಕಾರ ನೀಡಬೇಕು ಎಂದರು.
ಕಳೆದ ೪೫ ದಿನಗಳ ಹಿಂದೆಯೇ ಸರ್ಕಾರ ಈ ಐವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅವರನ್ನು ನಗರಪಾಲಿಕೆಗೆ ಪರಿಚಯಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಪರಿಚಯಿಸುವ ಕೆಲಸ ಮಾಡಲಾಗಿದೆ. ಮುಂದೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ಸಹಕಾರ ಮತ್ತ ಸಲಹೆ ನೀಡುವ ಮೂಲಕ ನಗರದ ಅಭಿವೃದ್ದಿಯಲ್ಲಿ ತಮ್ಮ ಕೈಲಾದ ಸೇವೆ ಮಾಡುವಂತೆ ನಾಮನಿರ್ದೇಶಿತ ಸದಸ್ಯರಿಗೆ ಮನವಿ ಮಾಡಿದರು.
ಮೇಯರ್ ಫರೀದಾ ಬೇಗಂ ಮಾತನಾಡಿ, ಸರ್ಕಾರ ವಿವಿಧ ಕ್ಷೇತ್ರಗಳ ಐದು ಜನರನ್ನು ತುಮಕೂರು ಮಹಾನಗರ ಪಾಲಿಕೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಅವರೆಲ್ಲರಿಗೂ ಆಡಳಿತ ಮಂಡಳಿಯ ಪರವಾಗಿ ಸ್ವಾಗತ ಕೋರುತ್ತೇನೆ. ತುಮಕೂರು ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ವ್ಯವಸ್ಥಿತವಾಗಿ ಅಭಿವೃದ್ದಿ ಹೊಂದುವ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ, ಸಲಹೆ ಮುಖ್ಯವಾಗಿದೆ. ನಿಮ್ಮ ಅನುಭವಗಳ ಆಧಾರದಲ್ಲಿ ತುಮಕೂರು ನಗರದ ಬೆಳೆವಣಿಗೆಗೆ ಸಹಕರಿಸುವಂತೆ ಕೋರಿದರು.
ಪಾಲಿಕೆ ಆಯುಕ್ತೆ ರೇಣುಕಾ ನೂತನ ನಾಮನಿರ್ದೇಶಿತ ಸದಸ್ಯರಿಗೆ ಸ್ವಾಗತ ಕೋರಿ ಮಾತನಾಡಿ, ನಗರದ ಅಭಿವೃದ್ಧಿ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಇದರಿಂದ ಸದಸ್ಯರ ಸಂಖ್ಯೆ ೪೦ಕ್ಕೆ ಹೆಚ್ಚಾಗಿದೆ. ಸರ್ಕಾರದಿಂದ ಅನುದಾನ ಪಡೆಯುವುದು ಸೇರಿದಂತೆ ಎಲ್ಲಾ ರೀತಿ ಅಭಿವೃದ್ದಿಯಲ್ಲಿಯೂ ತಮ್ಮ ಸಲಹೆ, ಸಹಕಾರ ಬಯಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಟಿ.ಜಿ.ಕೃಷ್ಣಪ್ಪ, ರಮೇಶ್, ವಿಷ್ಣುವರ್ಧನ್, ಮಂಜುನಾಥ್, ಗಿರಿಜಾ ಧನಿಯಕುಮಾರ್, ಮಂಜುಳ ಆದರ್ಶ, ನಿರ್ಮಲ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.