ತುಮಕೂರಿನಲ್ಲಿ ನಾಳೆ ಸಚಿವರು, ಶಾಸಕರಿಗೆ ಅಭಿನಂದನಾ ಸಮಾರಂಭ

ತುಮಕೂರು, ಆ. ೧೯- ಜಿಲ್ಲೆಯ ಸಹಕಾರಿಗಳಿಂದ ನೂತನವಾಗಿ ಆಯ್ಕೆಯಾಗಿರುವ ಸಚಿವರು ಮತ್ತು ಶಾಸಕರುಗಳಿಗೆ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟ ಅಭಿನಂದನಾ ಸಮಾರಂಭವನ್ನು ನಗರದ ಗಾಜಿನಮನೆಯಲ್ಲಿ ಆ. ೨೦ ರಂದು ಹಮ್ಮಿಕೊಂಡಿದೆ.
ಜಿಲ್ಲೆಯಿಂದ ಆಯ್ಕೆಯಾಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಶಾಸಕರುಗಳನ್ನು ಅಭಿನಂದಿಸಲು ಸಹಕಾರಿ ಸಂಘಗಳ ಒಕ್ಕೂಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಟಿಎಂಸಿಸಿ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿಗಳ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಾ. ಎನ್.ಎಸ್. ಜಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆ. ೨೦ ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿರುವ ಅಭಿನಂದನಾ ಸಮಾರಂಭವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿಗಳ ಅಭಿನಂದನಾ ಸಮಿತಿಯ ಅಧ್ಯಕ್ಷ ಎನ್.ಎಸ್. ಜಯಕುಮಾರ್ ವಹಿಸುವರು. ವಿಶೇಷ ಆಹ್ವಾನಿತರಾಗಿ ಸಂಸದರಾದ ಜಿ.ಎಸ್. ಬಸವರಾಜು, ಡಿ.ಕೆ. ಸುರೇಶ್ ಪಾಲ್ಗೊಳ್ಳುವರು ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕರುಗಳಾದ ಟಿ.ಬಿ. ಜಯಚಂದ್ರ, ಕೆ.ಷಡಕ್ಷರಿ, ಎಸ್.ಆರ್. ಶ್ರೀನಿವಾಸ್, ಬಿ. ಸುರೇಶ್‌ಗೌಡ, ಸಿ.ಬಿ. ಸುರೇಶ್‌ಬಾಬು, ಹೆಚ್.ವಿ. ವೆಂಕಟೇಶ್, ರಾಜೇಂದ್ರ, ಹೆಚ್.ಡಿ. ರಂಗನಾಥ್, ಜಿ.ಬಿ. ಜ್ಯೋತಿಗಣೇಶ್, ಎಂ.ಟಿ. ಕೃಷ್ಣಪ್ಪ ಅವರನ್ನು ಅಭಿನಂದಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಪಾಲ್ಗೊಳ್ಳುವರು ಎಂದರು.
ಈ ಸಮಾರಂಭಕ್ಕೆ ಜಿಲ್ಲೆಯಾದ್ಯಂತ ಸುಮಾರು ೧೨ ರಿಂದ ೧೫ ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕೆಲ ಸಮಸ್ಯೆಗಳ ಕುರಿತು ಸಚಿವರುಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಸಹಕಾರಿಗಳ ಸಾಲ ವಸೂಲಾತಿ ವೇಳೆ ಅಧಿಕಾರಿಗಳು ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹಾಗಾಗಿ ಅಧಿಕಾರಿಗಳಿಗೆ ಸಹಕಾರಿ ಸಂಘಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಸೂಚಿಸುವಂತೆ ಮನವಿ ಮಾಡಲಾಗುವುದು ಎಂದರು.
ಜಿಲ್ಲೆಗೆ ತ್ವರಿತ ವಿಲೇವಾರಿ ನ್ಯಾಯಾಲಯ ಮಂಜೂರಾತಿ ಮಾಡುವಂತೆಯೂ ಸಚಿವರುಗಳಿಗೆ ಮನವಿ ಮಾಡಲಾಗುವುದು ಎಂದ ಅವರು, ತುಮಕೂರು ಜಿಲ್ಲೆ ಮಾತ್ರವಲ್ಲದೆ, ರಾಜ್ಯದ ಎಲ್ಲ ಜಿಲ್ಲೆಗಳಿಗೂ ತ್ವರಿತ ವಿಲೇವಾರಿ ನ್ಯಾಯಾಲಯ ಮಂಜೂರೂ ಮಾಡುವಂತೆ ಕೋರಲಾಗುವುದು ಎಂದು ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಬರದ ಛಾಯೆ ಕಾಣುತ್ತಿದ್ದು, ಬರಪೀಡಿತ ಪ್ರದೇಶ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಬರ ಆವರಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಪಡೆದ ಸಾಲವನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಬಾರಿ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಲಾಗುವುದು ಎಂದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಪಡೆದ ವ್ಯಕ್ತಿ ಮರಣ ಹೊಂದಿದರೆ ಆತನ ೧ ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತಿತ್ತು. ಈಗ ಅದನ್ನು ೫೦ ಸಾವಿರಕ್ಕೆ ಇಳಿಸಲಾಗಿದೆ. ಸಾಲ ಪಡೆದ ವ್ಯಕ್ತಿ ಮರಣ ಹೊಂದಿದರೆ ಆತನ ಕುಟುಂಬ ಸಂಕಷ್ಟಕ್ಕೆ ಸಿಲುಕಿರುತ್ತದೆ. ಆದ್ದರಿಂದ ಮರಣ ಹೊಂದಿದ ವ್ಯಕ್ತಿಯ ೧ ಲಕ್ಷ ರೂ. ವರೆಗಿನ ಸಾಲವನ್ನು ರಾಜ್ಯಾದ್ಯಂತ ಡಿಸಿಸಿ ಬ್ಯಾಂಕ್‌ಗಳಿಗೂ ವಿಸ್ತರಿಸುವಂತೆ ಸಚಿವರುಗಳಿಗೆ ಮನವಿ ಸಲ್ಲಿಸಲಾಗುವುದು. ಜತೆಗೆ ಯಶಸ್ವಿ ಯೋಜನೆಯ ಗುರುತಿನ ಚೀಟಿಗಳನ್ನು ತ್ವರಿತವಾಗಿ ವಿತರಿಸುವಂತೆಯೂ ಕೋರಲಾಗುವುದು ಎಂದು ವಿವರಿಸಿದರು.
ಜಿಲ್ಲೆಯ ಸಹಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಸಂಘಗಳ ಒಕ್ಕೂಟದ ಗಂಗಣ್ಣ, ವೆಂಕಟೇಗೌಡ, ಪಿ. ಮೂರ್ತಿ, ಕಲ್ಲಹಳ್ಳಿ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.