ತುಕ್ಕು ಹಿಡಿದ ವಾಹನಗಳು : ಹಳ್ಳ ಹಿಡಿದ ಕಸ ವಿಲೇವಾರಿ

*ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಾಧಿಕಾರಿ
*ಮಲೀನವಾಗುತ್ತಿರುವ ಲಿಂಗಸುಗೂರು ಪಟ್ಟಣದ
ದುರಗಪ್ಪ ಹೊಸಮನಿ
ಲಿಂಗಸುಗೂರು.ಏ.೧೮- ಮುಖ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿನ ಕಸ ಸಂಗ್ರಹಿಸುವ ವಾಹನಗಳು ದುರಸ್ಥಿಯಲ್ಲಿರುವುದರಿಂದ ಕಸ ವಿಲೇವಾರಿ ವ್ಯವಸ್ಥೆಗೆ ತುಕ್ಕು ಹಿಡಿದ ಸ್ವಚ್ಛ ಭಾರತದ ಕನಸಿಗೆ ತಣ್ಣೀರು ಎರಚಿದಂತಾಗಿದೆ.
೨೩ ವಾರ್ಡಗಳಲ್ಲಿ ಕಸ ಸಂಗ್ರಹಣೆ ಮಾಡಲು ೭ ಆಟೋಗಳು, ೩ ಟ್ಯಾಕ್ಟರ್‌ಗಳು, ಒಂದು ಜೆಸಿಬಿ ಇದ್ದು, ಇದರಲ್ಲಿ ೫ ಆಟೋಗಳು, ೧ ಟ್ರ್ಯಾಕ್ಟರ್ ಸಂಪೂರ್ಣವಾಗಿ ಕೆಟ್ಟು ನಿಂತಿವೆ. ಅವುಗಳನ್ನು ದುರಸ್ಥಿ ಮಾಡುವಲ್ಲಿ ಪುರಸಭೆ ಆಡಳಿತ ಸಂಪೂರ್ಣವಾಗಿ ಕೈಚೆಲ್ಲಿದ್ದರಿಂದ ವಾಹನಗಳು ಶುದ್ಧೀಕರಣ ಘಟಕದ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ. ಇರುವ ಎರಡು ಆಟೋ ಹಾಗೂ ಎರಡು ಟ್ರ್ಯಾಕ್ಟರ್‌ಗಳಲ್ಲಿ ೨೩ ವಾರ್ಡಗಳಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣ ಮಾಡುವ ಅನಿವಾರ್ಯತೆ ಬಂದೊಗಿದೆ.
೧೫ ವರ್ಷ ವಾಹನಗಳನ್ನು ಮಾತ್ರ ಗುಜರಿಗೆ ಹಾಕಲು ಆರ್‌ಟಿಓ ಇಲಾಖೆ ಪರವಾನಿಗೆ ನೀಡುತ್ತಿದೆ ಆದರೆ ೨೦೧೧-೧೨ನೇ ಸಾಲಿನಲ್ಲಿ ಆಟೋಗಳನ್ನು ಖರೀದಿಸಲಾಗಿದೆ. ಈ ವಾಹನಗಳನ್ನು ಗುಜರಿಗೆ ಹಾಕಲು ಆರ್‌ಟಿಓ ಇಲಾಖೆ ಅನುಮತಿ ನೀಡಿಲ್ಲ, ಈಗಾಗಿ ಹೊಸ ವಾಹನಗಳ ಖರೀದಿಗೆ ಆಗದೇ ಅತ್ತ ವಾಹನಗಳು ದುರಸ್ಥಿಯೂ ಆಗದೇ ಅನಗತ್ಯ ಸಮಸ್ಯೆಗಳು ಸೃಷ್ಠಿಯಾಗಿವೆ.
ಇದುಲ್ಲದೆ ಪ್ರತಿ ವಾರ್ಡಗೂ ತಳ್ಳುವ ಡಸ್ಟ್‌ಬಿನ್‌ಗಳು ಬಳಕೆ ಇಲ್ಲದೆ ಅನಾಥವಾಗಿ ಬಿದ್ದಿವೆ. ಲಕ್ಷಾಂತರ ರೂ.ವೆಚ್ಚದಲ್ಲಿ ಖರೀದಿಸಿದ ಡಸ್ಟ್‌ಬಿನ್‌ಗಳು ಉಪಯೋಗಿಸದೇ ಪುರಸಭೆ ಬೇಜವಬ್ದಾರಿತನ ಪ್ರದರ್ಶನ ಮಾಡುತ್ತಿದೆ.
ಪಟ್ಟಣದ ೨೩ ವಾರ್ಡಗಳಲ್ಲಿ ಕಸವಿಲೇವಾರಿ ಇಲ್ಲದೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಎಲ್ಲಡೆ ದುರ್ನಾತ ಬೀರುತ್ತಿದೆ. ಕಸದ ವಾಹನಗಳು ಇಲ್ಲದಿರುವುದರಿಂದ ಸಾರ್ವಜನಿಕರು ಕಸ ಎಲ್ಲಿಂದರಲ್ಲಿ ಹಾಕುತ್ತಿದ್ದಾರೆ. ಇದರಿಂದ ಸ್ವಚ್ಚ ಭಾರತದ ಕನಸು ಇಲ್ಲಿನ ಅಧಿಕಾರಿಗಳು ಮಲೀನ ಭಾರತವನ್ನಾಗಿ ಮಾಡುತ್ತಿದ್ದಾರೆ ಎಂದು ಇಲ್ಲಿನ ಜನತೆ ಆಕ್ರೋಶವ್ಯಕ್ತಪಡಿಸಿದ್ದಾರೆ. ಇದುಲ್ಲದೆ ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಫಾಗಿಂಗ್ ಮಾಡಿಸುವಲ್ಲಿ ಪುರಸಭೆ ಆಡಳಿತ ನಿರ್ಲಕ್ಷ್ಯವಹಿಸುತ್ತಿದೆ.
ಕಸ ವಿಲೇವಾರಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು ದುರಸ್ಥಿ ನೆಪದಲ್ಲಿ ಹಣ ಪೋಲು ಮಾಡುವ ಬದಲು ಹೊಸ ವಾಹನಗಳ ಖರೀದಿಗೆ ಟೆಂಡರ್ ಕರೆಯಬೇಕು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳು ಗಮನ ಹರಿಸಬೇಕು ಇಲ್ಲವಾದಲ್ಲಿ ಮುಖ್ಯಾಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಲಾಗುವುದು ಎಂದು ಪುರಸಭೆ ಸದಸ್ಯರಾದ ರುದ್ರಪ್ಪ ಬ್ಯಾಗಿ, ಸೋಮನಗೌಡ ಕರಡಕಲ್, ಯಮನಪ್ಪ ದೇಗಲಮಡಿ, ಮೌಲಸಾಬ, ಇತರೆ ಸದಸ್ಯರು ಎಚ್ಚರಿಸಿದ್ದಾರೆ.
ಕಸ ವಿಲೇವಾರಿ ಬಗ್ಗೆ ಮುಖ್ಯಾಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಮಾಡಿದ್ದೇವೆ ಆದರೆ ಈ ಬಗ್ಗೆ ಅವರು ಜಾಣಕುರುಡತನ ಪ್ರದರ್ಶನ ಮಾಡುತ್ತಿದ್ದಾರೆ. ಕೂಡಲೇ ಕಸದ ವಿಲೇವಾರಿ ಸಮಸ್ಯೆ ಪರಿಹರಿಸಬೇಕು ಎಂದು ಬೀದಿ ವ್ಯಾಪಾರಿಗಳ ಮಹಾಮಂಡಳ ಅಧ್ಯಕ್ಷ ಮಹಿಬೂಬುಪಾಶಾ ಆಗ್ರಹಿಸಿದ್ದಾರೆ.
ಹೊಸ ವಾಹನಗಳ ಖರೀದಿಗೆ ಆರ್‌ಟಿಓ ಇಲಾಖೆ ಪರವಾನಿಗೆ ನೀಡುತ್ತಿಲ್ಲ, ಈಗಾಗಿ ಕಸ ವಿಲೇವಾರಿಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ನೈರ್ಮಲ್ಯ ನಿರೀಕ್ಷಕ ರಾಘವೇಂದ್ರ ತಿಳಿಸಿದ್ದಾರೆ.