ತುಂಬೆ ಹೂವಿನ ಉಪಯೋಗಗಳು

ತುಂಬೆ! ಇದೊಂದು ಪುಟ್ಟ ಹೂವು ಬಿಡುವ ಗಿಡ. ಬೇಲಿಗಳಲ್ಲಿ, ರಸ್ತೆಗಳ ಅಂಚಿನಲ್ಲಿ ನಗುನಗುತ್ತಾ ಕಂಗೊಳಿಸುವ ಈ ಪುಟ್ಟ ಸಸ್ಯದಲ್ಲಿ ಔಷಧದ ಭಂಡಾರವೇ ಅಡಗಿದೆ. ಭಗವಂತನಿಗೆ ಪ್ರಿಯವಾಗುವ ಸಸ್ಯಗಳು, ಹೂವುಗಳು, ಪತ್ರೆಗಳು ಎಲ್ಲವೂ ಕೂಡ ಯಥೇಚ್ಛವಾದ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಶಿವನಿಗೆ ಪುಟ್ಟ ತುಂಬೆ ಪ್ರೀತಿ ಅಂತ ಹೇಳಿ ಹುಡುಕಿ ತಂದು ಪೂಜೆ ಮಾಡುತ್ತೀವಿ. ಯಾಕಾಗಿ ನಮ್ಮ ಪೂರ್ವಿಕರು ಭಗವಂತನಿಗೆ ಪ್ರಿಯ ಅಂತ ಹೇಳಿದ್ದಾರೆ? ಪೂಜೆಗಾಗಿ ನಾವು ಕೆಲವು ಹೂ ಪತ್ರೆಗಳನ್ನು ಸಂರಕ್ಷಿಸುತ್ತೀವಿ. ಈ ರೀತಿ ಸಂರಕ್ಷಣೆ ಮಾಡಲಿ ಅಂತಾನೇ ಭಗವಂತನ ಹೆಸರು ಹೇಳಿರುವುದು. ಹಿಂದೆಲ್ಲಾ ಈ ಹೂವಿನ ಗಿಡ ಎಲ್ಲರ ಮನೆಯ ಹಿತ್ತಲಲ್ಲಿ, ಬೇಲಿಯಲ್ಲಿ, ಹಳೇ ಮನೆಯ ಗೋಡೆಗಳ ಬದಿಯಲ್ಲಿ, ರಸ್ತೆಯ ಪಕ್ಕಗಳಲ್ಲಿ ಕಾಣಸಿಗುತ್ತಿತ್ತು. ಆದರೆ ಈಗ ಅಷ್ಟು ಸುಲಭವಾಗಿ ನಗರ ಪ್ರದೇಶಗಳಲ್ಲಿ ಸಿಗುವುದಿಲ್ಲ. ಇಡೀ ಭರತ ಖಂಡದಲ್ಲೆಲ್ಲಾ ವ್ಯಾಪಕವಾಗಿರುವ ಈ ಸಸ್ಯ ಅತ್ಯಂತ ಪ್ರಯೋಜನಕಾರಿಯಾಗಿದೆ.

ಈ ಮೂಲಿಕೆ ಕಫವನ್ನು ಹೊರದೂಡುವಂಥದ್ದು, ಕ್ರಿಮಿನಾಶಕ, ಮೃದುವಿರೇಚಕ, ಮೂಲವ್ಯಾಧಿ, ಕಣ್ಣಿನ ಸಮಸ್ಯೆಗಳು, ವಾತದೋಷ, ರಕ್ತ ಶೋಧಕ, ಮಲಬದ್ಧತೆ, ಕಫ ಸಂಬಂಧಿ ಸಮಸ್ಯೆ ಕಾಮಾಲೆ, ಉದರ ಸೂಲೆ, ಚರ್ಮರೋಗ, ನೆಗಡಿ, ಕೆಮ್ಮು, ವಿಷಮ ಜ್ವರ, ಸರ್ಪವಿಷ ಇಷ್ಟೆಲ್ಲಾ ಸಮಸ್ಯೆಗಳನ್ನು ಗುಣಪಡಿಸುವಂತಹ ಅಮೂಲ್ಯ ಗುಣಗಳಿಂದ ಕೂಡಿದೆ.

೧. ಅರಿಶಿನ ಕಾಮಾಲೆ: ಹಿಡಿ ತುಂಬೆ ಸೊಪ್ಪನ್ನು ತಂದು ಚೆನ್ನಾಗಿ ತೊಳೆದು, ಜಜ್ಜಿ ರಸ ತೆಗೆದು ಇಟ್ಟುಕೊಳ್ಳಿ. ಈ ರಸಕ್ಕೆ ಚಿಟಿಕೆ ಕಾಳು ಮೆಣಸು ಪುಡಿ, ಚಿಟಿಕೆ ಸೈಂಧವ ಲವಣ, ಬೆರೆಸಿ ಪ್ರತಿದಿನ ೩ ಬಾರಿ ಕೆಲವು ದಿನಗಳ ಕಾಲ ಸೇವಿಸುತ್ತಾ ಬಂದರೆ ಅರಿಶಿನ ಕಾಮಾಲೆಗೆ ಉತ್ತಮ ಪರಿಹಾರ.
೨. ನೆಗಡಿಗೆ: ಒಣಗಿದ ತುಂಬೆ ಸೊಪ್ಪಿನ ಚೂರ್ಣ ಸಮಪ್ರಮಾಣ ಅತಿ ಮಧುರದ ಚೂರ್ಣ, ಜೇನುತುಪ್ಪದ ಜೊತೆ ೩ ದಿನಗಳ ಕಾಲ ಬೆಳಿಗ್ಗೆ, ಸಂಜೆ ಸೇವಿಸಿ.
೩. ಕೆಮ್ಮಿಗೆ: ೧/೨ ಚಮಚ ಅಕ್ಕಿಕಾಳು, ೧ ಹಿಡಿ ತುಂಬೆಯ ಚಿಹುರೆಲೆ ಎರಡನ್ನು ಚೆನ್ನಾಗಿ ಅರೆದು, ಅದನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ, ೩ ದಿನಗಳಲ್ಲಿ ಕೆಮ್ಮು, ನೆಗಡಿಗೆ, ಒಳ್ಳೆಯ ಪರಿಹಾರ.
೪. ಮೂಲವ್ಯಾಧಿ: ತುಂಬೆ ಸೊಪ್ಪಿನ ರಸಕ್ಕೆ ಸುಣ್ಣದ ತಿಳಿನೀರಿನ್ನು ಸೇರಿಸಿ ಸೇವಿಸುತ್ತಾ ಬಂದರೆ, ಮೂಲವ್ಯಾಧಿಯ ಮೊಳಕೆಗಳು ನಶಿಸುತ್ತಾ ಬರುತ್ತದೆ.
೫. ಹೊಟ್ಟೆನೋವಿಗೆ: ಖರ್ಜೂರವನ್ನು ತುಂಬೆ ಸೊಪ್ಪಿನ ರಸದಲ್ಲಿ ಅರೆದು ಸೇವಿಸಿದರೆ ಅನುಕೂಲವಾಗುತ್ತದೆ.
೬. ಅಜೀರ್ಣಕ್ಕೆ ಮತ್ತು ಹಸಿವು ಹೆಚ್ಚಾಗಲು: ತುಂಬೆಯ ಚಿಗುರೆಲೆಗಳನ್ನು ಬಾಳೆಯ ಎಲೆಯಲ್ಲಿ ಸುತ್ತಿ ಬೆಂಬೂದಿಯಲ್ಲಿಟ್ಟು, ಸ್ವಲ್ಪ ಸಮಯದ ನಂತರ ತೆಗೆಯಿರಿ. ಒಳಗಿರುವ ತುಂಬೆ ಸೊಪ್ಪು ಹದವಾಗಿ ಬೆಂದಿರುತ್ತದೆ. ಆ ಸೊಪ್ಪಿಗೆ ಸ್ವಲ್ಪ ಸೈಂಧವ ಲವಣವನ್ನು ಸೇರಿಸಿ ತಿನ್ನಬೇಕು.
೭. ಅರ್ಧತಲೆನೋವಿಗೆ: ತುಂಬೆ ಸೊಪ್ಪಿನ ರಸವನ್ನು ೨ ಬಾರಿ ಶೋಧಿಸಿ, ೨-೨ ಹನಿ ಮೂಗಿನ ಹೊಳ್ಳೆಗಳಿಗೆ ಹಾಕಬೇಕು.
೮. ಮುಟ್ಟಿನ ಸಮಯದ ಹೊಟ್ಟೆನೋವು: ೧ ಚಮಚ ತುಂಬೆರಸ, ೧ ಚಮಚ ನಿಂಬೆರಸ ಹಾಗೂ ೧ ಚಿಟಿಕೆ ಉಪ್ಪು ಸೇರಿಸಿ ೩ ದಿನಗಳ ಕಾಲ ಬೆಳಿಗ್ಗೆ ಸಂಜೆ ೩ ತಿಂಗಳು ಸೇವಿಸಿದರೆ, ಮುಂದಿನ ತಿಂಗಳುಗಳಿಂದ ಈ ಸಮಸ್ಯೆ ಬರುವುದಿಲ್ಲ.
೯. ಚರ್ಮದ ರೋಗಕ್ಕೆ: ತುಂಬೆ ಸೊಪ್ಪಿನ ರಸವನ್ನು ಲೇಪಿಸುವುದರಿಂದ ನವೆ, ತುರಿಕೆ, ಕಜ್ಜಿ, ಇಸಬು, ಗಜಕರ್ಣ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧