ತುಂಬಿ ಹರಿಯುತ್ತಿರುವ ನಾರಿಹಳ್ಳ


ಸಂಜೆವಾಣಿ ವಾರ್ತೆ
ಸಂಡೂರು:ಸೆ:4: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ತಾಲೂಕಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ, ಅದರಲ್ಲೂ ನಾರಿಹಳ್ಳ ಜಲಾಶಯವೂ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದು ಎಲ್ಲಾ ಗೇಟ್‍ಗಳಲ್ಲಿಯೂ ಸಹ ನೀರು ಬಿಟ್ಟಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಸಂಡೂರು ಹೋಬಳಿಯಲ್ಲಿ 44 ಸೆಂ.ಮೀ., ಚೋರನೂರು ಹೋಬಳಿಯಲ್ಲಿ 40 ಸೆಂ.ಮೀ., ವಿಠ್ಠಲಾಪುರದಲ್ಲಿ 21.1 ಸೆಂ.ಮೀ., ಕುರೇಕುಪ್ಪದಲ್ಲಿ 1.00 ಸೆಂ.ಮೀ. ಮಳೆಯಾಗಿದ್ದು ಇದರಿಂದ ರೈತರು ಬಹುತೇಕ ಕುರೇಕುಪ್ಪ ಪ್ರದೇಶದ ಬಹುತೇಕ ಕೃಷಿ ಜಮೀನು ನೀರಿನಲ್ಲಿ ಮುಳುಗಿದ್ದು ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತಾಲೂಕಿನ ಭುಜಂಗನಗರ, ಚೋರನೂರು, ತಾರಾನಗರ, ವಡ್ಡು, ಕುರೇಕುಪ್ಪ ಪ್ರದೇಶದ ಬಹುತೇಕ ರೈತ ಮೆಕ್ಕೆಜೋಳ, ಜೋಳ, ತರಕಾರಿ ಬೆಳೆಗಳು ನೀರಿನಲ್ಲಿ ಮುಳುಗಿ ಬಿತ್ತಿದ ಬೆಳೆ ಕೈಗೆ ಸಿಗದಂತಹ ಸ್ಥಿತಿ ಉಂಟಾಗಿದೆ.
ಮಳೆಯಿಂದ ಮನೆಗಳು ಸಹ ಕುಸಿದು ಬಿದ್ದಿದ್ದು ಬಂಡ್ರಿ, ಚೋರನೂರು, ತಾರಾನಗರ, ಅಂಕಮನಾಳ್, ಬೊಮ್ಮಘಟ್ಟ ಗ್ರಾಮಗಳಲ್ಲಿ ಮನೆಗಳ ಬಿದ್ದ ಪರಿಣಾಮ ರೈತರು ಮನೆಯಿಲ್ಲದೇ ಪರದಾಡುವಂತಾಗಿದೆ. ಇನ್ನೂ ಸಂಡೂರು ಹೊಸಪೇಟೆ ರಸ್ತೆ ಪೂರ್ಣಪ್ರಮಾಣದಲ್ಲಿ ನೀರಿನಿಂದ ಅವೃತ್ತವಾಗಿದ್ದು ಬಸ್ ಸಂಚಾರವಾಗಲಿ, ದ್ವಿಚಕ್ರವಾಹನಗಳ ಸಂಚಾರವೂ ಸಹ ದುಸ್ತರವಾಗಿದೆ. ಮಳೆಯಿಂದ ಅಪಾರ ಬೆಳೆ ಹಾಗೂ ಮನೆಗಳ ಹಾನಿಯನ್ನು ಕಂದಾಯ ಇಲಾಖೆ , ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿ ಸರ್ವೇ ಕಾರ್ಯ ಮಾಡಬೇಕಾಗಿದೆ, ಕೃಷಿ ಇಲಾಖೆ ಈಗಾಗಲೇ ಜೋಳ, ಮೆಕ್ಕೆ ಜೋಳದ ನಷ್ಟದ ಸರ್ವೇಕಾರ್ಯಕ್ಕೆ ಮುಂದಾಗಿದೆ, ಅದರೆ ಯಾವ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಇನ್ನೂ ಪೂರ್ಣಮಾಹಿತಿ ಇಲ್ಲವಾಗಿದೆ.
ಒಂದು ಕಡೆ ಮಳೆಯಿಂದ ಕೆಲ ರೈತರಿಗೆ ಸಂತಸವಾದರೆ ಮತ್ತೆ ಕೆಲ ರೈತರು ಸಾಲದ ಶೂಲಕ್ಕೆ ಸಿಲುಕುವಂತಹ ದುಸ್ಥಿತಿ ಉಂಟಾಗಿದೆ, ಕಾರಣ ಕೈಗೆ ಬಂದ ಜೋಳ, ಮೆಕ್ಕೆ ಜೋಳದ ಬೆಳೆ ನೀರಿನಲ್ಲಿ ಮುಳುಗಿಹೋಗಿದೆ. ತಕ್ಷಣ ಸರ್ಕಾರ ಸ್ಪಂದಿಸುವ ಮೂಲಕ ಸಂಕಷ್ಟದಲ್ಲಿಯ ರೈತರನ್ನು ರಕ್ಷಿಸಬೇಕಾಗಿದೆ.