ತುಂಬಿ ತುಳುಕಿದ ಚಿ.ಬಳ್ಳಾಪುರ ಕೆರೆಗಳು

ಚಿಕ್ಕಬಳ್ಳಾಪುರ, ನ. ೨೩- ಬರದ ನಾಡೇ ಎಂದೇ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬಹುತೇಕ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಈ ಅಭೂತ ಪೂರ್ವ ದೃಶ್ಯವನ್ನು ಡ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.
ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿರುವ ಜಲಾಪಾತಗಳು ಮೈದುಂಬಿ ಹರಿಯುತ್ತಿವೆ. ನದಿಗಳು, ಭೋರ್ಗರೆದು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೊಟಿ ಗ್ರಾಮದ ಕೆರೆ ೩೦ ವರ್ಷಗಳ ಬಳಿಕ ಕೋಡಿ ಹರಿದಿದ್ದು, ಈ ಭಾಗದ ಜನರಿಗೆ ಸಂತಸ ಉಂಟು ಮಾಡಿದೆ.
೪೨೬ ಎಕರೆ ವಿಶಾಲ ವಿಸ್ತೀರ್ಣ ಹೊಂದಿರುವ ಈ ಕೆರೆ ತಾಲ್ಲೂಕಿನ ಅತ್ಯಂತ ದೊಡ್ಡದಾದ ಕೆರೆಗಳಲ್ಲಿ ಒಂದೇನಿಸಿದೆ. ಗ್ರಾಮದ ರೈತರ ಜಮೀನುಗಳಿಗೆ ಬೆಳ್ಳೊಟಿ, ಚೌಡಸಂದ್ರ, ಮೇಲೂರು, ಭಕ್ತರಹಳ್ಳಿ, ಕಾಕಜೊಕ್ಕಂಡಹಳ್ಳಿ ಕೆರೆಗಳು ನೀರಾವರಿ ಪ್ರಮುಖ ಮೂಗಳಾಗಿವೆ.
ನದಿಗಳು ಭರ್ತಿಯಾಗಿರುವುದರಿಂದ ರೈತರಿಗೆ ಮೂರ್ನಾಲ್ಕು ವರ್ಷ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ. ಬೆಳ್ಳೊಟಿ ಚೌಡಸಂದ್ರ ಗ್ರಾಮದ ಕೆರೆ ಏರಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಈ ಕೆರೆ ದೃಶ್ಯಗಳೂ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆಕರ್ಷಕವಾಗಿ ಕಂಗೊಳಿಸುತ್ತವೆ.
ನರೇಗಾ ಯೋಜನೆಯಡಿ ಕೆರೆಯ ಹೂಳೆತ್ತಲಾಗಿದ್ದು, ಕೆರೆಗೆ ಸಂಪರ್ಕಿಸುವ ಕಾಲುವೆಗಳನ್ನು ಮರುನಿರ್ಮಾಣ ಮಾಡಲಾಗಿತ್ತು. ಇದರಿಂದಾಗಿ ಕೆರೆಗಳು ತುಂಬಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಸಂತೋಷ್ ತಿಳಿಸಿದರು.