ತುಂಬಿನಕೆರೆಯಲ್ಲಿ ಹರ್ ಘರ್ ಜಲ್ ಉತ್ಸವ

ಹೂವಿನಹಡಗಲಿ ನ.5: “ಮನೆ ಮನೆಗೆ ಗಂಗೆ” ಅಭಿಯಾನದಡಿಯಲ್ಲಿ ತುಂಬಿನಕೆರೆ ಗ್ರಾಮದ ಎಲ್ಲಾ ಮನೆಗಳಿಗೆ, ಶಾಲೆಗಳಿಗೆ, ಅಂಗನವಾಡಿಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಈ ಗ್ರಾಮದಲ್ಲಿ “ಹರ್ ಘರ್ ಜಲ್” (“ನಮ್ಮ ಮನೆಗೆ ಗಂಗೆ”)  ಘೋಷಣೆ ಮಾಡಿ, ಉತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎನ್ ನಾಗಪ್ಪನವರು ಹೇಳಿದರು.ಅವರು ಇಂದು ಹೂವಿನ ಹಡಗಲಿ ತಾಲ್ಲೂಕಿನ ತುಂಬಿನಕೆರೆ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೀರಬ್ಬಿ ಗ್ರಾಮ ಪಂಚಾಯಿತಿ ಮತ್ತು ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಶ್ರೀ ನಾರದಮುನಿ ಸೇವಾ ಸಂಸ್ಥೆ ಇವರುಗಳು ಜಂಟಿಯಾಗಿ ಆಯೋಜಿಸಿದ್ದ “ನಮ್ಮ ಮನೆಗೆ ಗಂಗೆ” ಉತ್ಸವ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಜನರು ನೀರಿನ ಉಪಯೋಗ ಮತ್ತು ಮನೆಯಲ್ಲಿ ಬಳಸಿದ ನೀರನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ, ಮನೆಗಳ ಸುತ್ತ ಮುತ್ತಲಿನ ಪರಿಸರವನ್ನು ಬಹಳ ಶುಚಿತ್ವದಿಂದ ಕಾಪಾಡಿಕೊಳ್ಳಬೇಕು ಎಂದವರು ಕರೆ ನೀಡಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪನವರು ಮಾತನಾಡಿ, ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಚೆನ್ನಾಗಿರಬೇಕು. ಜನರ ಸಹಕಾರ ಇದ್ದರೆ ಮಾತ್ರ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಗ್ರಾಮದ ಮುಖಂಡರಾದ ಶಿವನಗೌಡ್ರು, ಯರಿಸ್ವಾಮಿ ಮಾತನಾಡಿ, ಇಂಜಿನಿಯರ್ ನಾಗಪ್ಪನವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ ಸಿದ್ದಮ್ಮನವರು ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಇಂಜಿನಿಯರ್ ನರಸಿಂಗನಾಯ್ಕ್, ಸಹಾಯಕ ಇಂಜಿನಿಯರ್ ವಿಜಯಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತನಾಯ್ಕ, ರಾಮನಾಯ್ಕ, ಗ್ರಾಮದ ಮುಖಂಡರಾದ ಬಸವರಾಜಪ್ಪ, ಶ್ರೀ ನಾರದಮುನಿ ಸೇವಾ ಸಂಸ್ಥೆ ಸಮುದಾಯ ಸಂಘಟಕರಾದ ಗಂಭೀರ ಸಿಂಗ್ ನಾಯ್ಕ್, ನಾಗೇಶ್ ನಾಯ್ಕ್, ಮುಂತಾದವರು ಉಪಸ್ಥಿತರಿದ್ದರು.