ತುಂಗಾ ಎಡ – ಬಲದಂಡೆ ನಾಲೆಗೆ ನೀರು

ಶಿವಮೊಗ್ಗ, ಜ. 8 : ಕರ್ನಾಟಕ ನೀರಾವರಿ ನಿಗಮವು ತುಂಗಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರನ್ನು ಆಣೆಕಟ್ಟೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗಾಗಿ ನೀರಿನ ಶೇಖರಣೆ ಆಣೆಕಟ್ಟೆಯಲ್ಲಿ ಅತ್ಯವಶ್ಯಕವಾಗಿದ್ದು, ತೋಟಗಾರಿಕೆ ಮತ್ತು ಬೆಳೆದುನಿಂತ ಬೆಳೆಗಳಿಗೆ ಮಾತ್ರ ನೀರನ್ನು ಕಾಲುವೆಯಲ್ಲಿ ಹರಿಸಲಾಗುವುದೆಂದು ಕರ್ನಾಟಕ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಈ ಭಾಗದಲ್ಲಿ ಬರುವ ರೈತರು ಬೇಸಿಗೆ ಬೆಳೆಗೆ ಭತ್ತದ ಬೆಳೆಯನ್ನು ಬೆಳೆಯದಂತೆ ಸೂಚಿಸಿರುವ ಅವರು, ಬೇಸಿಗೆ ಬೆಳೆ ಭತ್ತಕ್ಕೆ ನೀರನ್ನು ಪೂರೈಸಲು ಸಾಧ್ಯವಾಗದಿರುವುದನ್ನು ರೈತರಿಗೆ ಸ್ಪಷ್ಟಪಡಿಸಿದ್ದಾರೆ. ರೈತರು ಈ ಸೂಚನೆಯನ್ನು ನಿರ್ಲಕ್ಷಿಸಿ ಭತ್ತ ಬೆಳೆದು ಹಾನಿಯಾದಲ್ಲಿ ಬೆಳೆ ಪರಿಹಾರಕ್ಕೆ ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದವರು ತಿಳಿಸಿದ್ದಾರೆ.
ಜನವರಿ 14ರಿಂದ 27ರವರೆಗೆ, ಫೆಬ್ರವರಿ 06ರಿಂದ 20ರವರೆಗೆ, ಮಾರ್ಚ್ 02ರಿಂದ 15ರವರೆಗೆ, ಮಾರ್ಚ್ 25ರಿಂದ ಏಪ್ರಿಲ್ 08ರವರೆಗೆ ಹಾಗೂ ಏಪ್ರಿಲ್ 18ರಿಂದ ಮೇ 01ರವರೆಗೆ ತುಂಗಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರು ವಿತರಣೆÀಯನ್ನು ನಿಲ್ಲಿಸಲಾಗುವುದು.
ಜನವರಿ 05ರಿಂದ 13ರವರೆಗೆ, ಜನವರಿ 28ರಿಂದ ಫೆಬ್ರವರಿ 05ರವರೆಗೆ, ಫೆಬ್ರವರಿ 21ರಿಂದ ಮಾರ್ಚ್ 01ರವರೆಗೆ, ಮಾರ್ಚ್ 16ರಿಂದ 24ರವರೆಗೆ, ಏಪ್ರಿಲ್ 09ರಿಂದ 17ರವರೆಗೆ ಹಾಗೂ ಮೇ 02ರಿಂದ 10ರವರೆಗೆ ಸದರಿ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.