ತುಂಗಭದ್ರ ನದಿ ಪುಷ್ಕರಕ್ಕೆ ಭರದ ಸಿದ್ದತೆ : ಸ್ವಚ್ಚತೆ ಮರೀಚಿಕೆ

ಸಿರುಗುಪ್ಪ, ನ.19: ತಾಲೂಕಿನ ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿಯಲ್ಲಿ ನಾಳೆಯಿಂದ ಡಿ.01ರ ವರೆಗೆ ನಡೆಯುವ ತುಂಗಭದ್ರ ನದಿ ಪುಷ್ಕರಣೆಗೆ ಆಗಮಿಸುವ ಭಕ್ತರಿಗೆ ತಾಲೂಕು ಆಡಳಿತವತಿಯಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಕೆಂಚನಗುಡ್ಡ ಗ್ರಾಮದ ಹತ್ತಿರದ ಐತಿಹಾಸಿಕ ವಿಜಯನಗರ ಆಣೆಕಟ್ಟು ಪ್ರದೇಶಗಳಲ್ಲಿ ಭಕ್ತರಿಗೆ ತುಂಗಭದ್ರ ನದಿಯಲ್ಲಿ ಪುಷ್ಕರ ಸ್ನಾನ ಕೈಗೊಳ್ಳಲು ತಾಲೂಕು ಆಡಳಿತ, ನೀರಾವರಿ ಇಲಾಖೆ ನೇತೃತ್ವದಲ್ಲಿ ಅಗತ್ಯ ಎಚ್ಚರಿಕೆ ಕೈಗೊಂಡು ಯಾವುದೇ ಅವಘಡಗಳು ಆಗದಂತೆ ಬ್ಯಾರಿಕೇಡ್‍ಗಳನ್ನು ಕಟ್ಟಲಾಗಿದ್ದು, ಮಹಿಳೆಯರಿಗೆ ಸ್ನಾನದ ನಂತರ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದೆ.
ನದಿ ತೀರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಶ್ರೀವಸುಧೇಂದ್ರ ತೀರ್ಥ ಶ್ರೀಪಾದಂಗಳ್‍ವರ ಮೂಲ ಬೃಂದಾವನ ಸನ್ನಿಧಾನದಲ್ಲಿ ಪುಷ್ಕರ ನಡೆಯುವ 12 ದಿನಗಳ ಕಾಲ ವಿಶೇಷವಾಗಿ ಶ್ರೀವಸುದೇಂಧ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀವಸುದೇಂಧ್ರ ತೀರ್ಥರ ಮೂಲ ಬೃಂದಾವನ ಸನ್ನಿಧಾನದ ಅರ್ಚಕರಾದ ರಂಗನಾಥ ಆಚಾರ್ಯರು ಮಾತನಾಡಿ ನದಿಗಳಲ್ಲಿಯೇ ತುಂಗಭದ್ರ ನದಿ ಶ್ರೇಷ್ಠವಾದ ನದಿಯಾಗಿದ್ದು, ಗಂಗಾ ಸ್ನಾನ ತುಂಗಪಾನ ಎನ್ನುವ ನಾನ್ನುಡಿ ಪ್ರಚಲಿತದಲ್ಲಿದ್ದು, ತುಂಗಭದ್ರ ನದಿಯು ಶ್ರೀ ವರಹಸ್ವಾಮಿ ದೇವರಿಂದ ಉದ್ಭವಿಸಿರುವುದರಿಂದ ಅತ್ಯಂತ ಶೇಷ್ಠವಾಗಿದೆ. ಪುಷ್ಕರ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡುವುದರಿಂದ ಸಕಲರಿಗೆ ಅತ್ಯಂತ ಪುಣ್ಯಫಲ ಪ್ರಾಪ್ತಿಯಾಗುತ್ತಿದ್ದು, ಪ್ರತಿವರ್ಷ ಗುರುವು 12 ರಾಶಿಗಳಲ್ಲಿ ಒಂದರಲ್ಲಿ ಪ್ರವೇಶ ಮಾಡುತ್ತಾನೆ. ನ.20ರಿಂದ ಡಿ.01ರ ವರೆಗೆ ಮಕರ ರಾಶಿಗೆ ಗುರುವು ಪ್ರವೇಶ ಮಾಡುವ ಸಮಯ ತುಂಗಭದ್ರ ನದಿಯಲ್ಲಿ ಮಹಾಪುಷ್ಕರ ಉಂಟಾಗಲಿದೆ. ಆಗ ಆಯಾ ನದಿಗಳಲ್ಲಿ ಪುಷ್ಕರನು ಮೂರುವರೆ ಕೋಟಿ ತೀರ್ಥಗಳ ಹಾಗೂ ಸಕಲ ಮುನಿಗಳ ಜತೆಯಲ್ಲಿ ವಾಸಿಸುತ್ತಾನೆ. ಈ ಸಮಯದಲ್ಲಿ ದೇವತೆಗಳು ಕೂಡ ಪುಣ್ಯಸ್ನಾನವನ್ನು ನದಿಗಳಲ್ಲಿ ಆಚರಿಸುತ್ತಾರೆ ಎನ್ನುವ ನಂಬಿಕೆ ಇದ್ದು, ಭಕ್ತರು ಗಂಗಾರತಿ, ಪುಣ್ಯಸ್ನಾನ, ಜಪ, ತಪಗಳು, ಶ್ರಾದ್ಧ ಮಾಡುವುದರಿಂದ ಗಂಗೆಯಲ್ಲಿ ಮಿಂದ ಪುಣ್ಯಪ್ರಾಪ್ತಿ ದೊರೆಯುತ್ತದೆ. ಪಾಪಗಳೆಲ್ಲವೂ ಪರಿಹಾರವಾಗುತ್ತವೆ.
ಭಕ್ತರಿಗೆ ಶ್ರೀವಸುದೇಂಧ್ರ ತೀರ್ಥರ ಸನ್ನಿಧಾನದಲ್ಲಿ ತೀರ್ಥ ಪ್ರಸಾದದ ವ್ಯವಸ್ಥೆ ಹಾಗೂ ಶ್ರಾದ್ಧ, ಕರ್ಮ ಮಾಡುವವರಿಗೆ ಪುರೋಹಿತರ ವ್ಯವಸ್ಥೆ ಇರುತ್ತದೆ. ಈ ವರ್ಷ ಮೇಷ, ಮಿಥುನ, ಸಿಂಹ, ತುಲಾ, ವೃಶ್ಚಿಕ, ಮಕರ, ಕುಂಬ ರಾಶಿಯವರಿಗೆ ಗುರುಬಲ ಇಲ್ಲದೇ ಇರುವುದರಿಂದ ಈ ಮೇಲ್ಕಂಡ ರಾಶಿಯವರು ಪುಷ್ಕರ ಸಮಯದಲ್ಲಿ ತುಂಗಾಭದ್ರ ನದಿಯಲ್ಲಿ ಪುಣ್ಯಸ್ನಾನ ಮಾಡುವುದರಿಂದ ಗುರುಬಲ ಪ್ರಾಪ್ತಿಯಾಗುತ್ತದೆ.
ಪುಷ್ಕರ ಸಮಯದಲ್ಲಿ ನದಿ ತಟದಲ್ಲಿ ಪಿತೃ ದೇವತೆಗಳಿಗೆ ಶ್ರಾದ್ಧ ಮಾಡುವುದರಿಂದ ಬದರಿನಾಥ ಕ್ಷೇತ್ರದಲ್ಲಿ ಆಚರಿಸಿದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ ಪಿತೃ ದೇವತೆಗಳು ಸಂತೃಪ್ತರಾಗುತ್ತಾರೆ. ಭಕ್ತರು ತುಂಗಾಭದ್ರ ನದಿಯಲ್ಲಿ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ನದಿಯ ಉದ್ಭವ ದೇವರಾದ ವರಹಸ್ವಾಮಿಯನ್ನು ಸ್ಮರಣೆಮಾಡಿ ಸ್ನಾನ ಮಾಡುವುದರಿಂದ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ.
ನದಿಯಲ್ಲಿ ಸುಳಿವು, ನದಿಯ ಆಳ, ನದಿಯಲ್ಲಿ ವಿಷಜಂತುಗಳ ವಾಸ ಇರುವದನ್ನು ತಿಳಿಸುವ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ, ಸ್ವಚ್ಚತೆ ಇಲ್ಲದೆ ಪುಷ್ಕರಕ್ಕೆ ಸಿದ್ದತೆಯಾಗುತ್ತಿದೆ.