ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು25: ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ಆಂದ್ರ ಮತ್ತು ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಮಂಗಳವಾರವೂ ಒಳಹಿರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು
ಒಂದೇ ದಿನ ಆರು ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ, ಹಾಗೂ ಮೇಲ್ಬಾಗದ ತುಂಗಾ ಹಾಗು ಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿರುವುದು ತುಂಗಭದ್ರಾ ಜಲಾಶಯದ ಒಳ ಹರಿವು ವೃದ್ಧಿಯಾಗಲು ಸಹಕಾರಿಯಾಗಿದ್ದು ಪ್ರತಿ ಕ್ಷಣ ಕ್ಷಣಕ್ಕೂ ವೃದ್ಧಿಯಾಗುತ್ತಿರುವುದಕ್ಕೆ ಕಾರಣವಾಗಿದೆ. ಇಂದು ಬೆಳ್ಳಿಗ್ಗೆ ದಾಖಲಾದ ಪ್ರಕಾರ ಸದ್ಯ 72,489 ಕ್ಯುಸೆಕ್ ಇದ್ದು, ಜಲಾಶಯದಲ್ಲಿ 31.658 ಟಿಎಂಸಿ ನೀರು ಸಂಗ್ರಹವಾದಂತಾಗಿದೆ. ಈ ಪ್ರಮಾಣದಲ್ಲಿ ಒಳಹರಿವು ಹರಿದು ಬಂದಲ್ಲಿ ದಿನಕ್ಕೆ ಸರಾಸರಿ 6 ಟಿಎಂಸಿಯಷ್ಟು ಜಲಾಶಯದಲ್ಲಿ ನೀರು ಸಂಗ್ರಹವಾಗಲಿದೆ. ಆಗಷ್ಟು 15ರ ವೇಳೆಗೆ ಜಲಾಶಯ ಭರ್ತಿಯಾಗಬಹುದು ಎಂಬ ಅಂದಾಜು ಇದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.
ತುಂಗಭದ್ರಾ ಜಲಾಶಯದ ಗರಿಷ್ಟ ಮಟ್ಟ:1633 ಅಡಿಗಳು, ಇಂದಿನ ಮಟ್ಟ 1606.78 ಅಡಿಗಳು, ಸಂಗ್ರಹ ಸಾಮಾಥ್ರ್ಯ 31.658 ಟಿಎಂಸಿ, ಒಳಹರಿವು 72489 ಕ್ಯುಸೆಕ್ಸ್ ಇದೆ. ಹೊರ ಹರಿವು 205 ಕ್ಯುಸೆಕ್ಸ್ ಇದೆ.
ಕಳೆದ ವರ್ಷ ಈಗಾಗಲೇ ಡ್ಯಾಂ ತುಂಬಿ ಎರಡನೇಯ ಬಾರಿ ನದಿಗೆ ನೀರು ಬಿಡಲಾಗಿತ್ತು. ಈಗಲೂ ಇದೆ ಪ್ರಮಾಣ ವೃದ್ಧಿಯೊಂದಿಗೆ ಮುಂದುವರೆದರೆ ಆಗಷ್ಟ ಮೊದಲ ವಾರವೇ ಜಲಾಶಯ ಭರ್ತಿಯಾಗಲಿದೆ ಎನ್ನಲಾಗುತ್ತಿದೆ.
ಜಿಲ್ಲೆಯಾದ್ಯಂತ ಹಾಗೂ ಜಲಾನಯನ ಪ್ರದೇಶದಲ್ಲೂ ಮಳೆ
ಕಳೆದ ಹತ್ತು ದಿನಗಳಿಂದ ನಿರಂತರ ಮಳೆ ವಿಜಯನಗರ ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಸುರಿಯುತ್ತಿದ್ದು ಕಳೆದೆರಡು ದಿನಗಳಿಂದ ನಿರಂತರವಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಸೋಮವಾರವಂತು ಮಧ್ಯಾಹ್ನದ ವರೆಗೆ ಬಿಡುವು ಕಂಡರು 3 ಗಂಟೆಯಿಂದ ನಿರಂತರವಾಗಿ ಭಾರಿ ಪ್ರಮಾಣದ ಮಳೆಯಾಗಿದೆ. ಜಿಲ್ಲೆಯ ಹರಪನಹಳ್ಳಿ, ಹಡಗಲಿ ಹಾಗೂ ಕೂಡ್ಲಿಗಿ ತಾಲೂಕಿನಲ್ಲಂತು ನಿರಂತರವಾಗಿ ಮಳೆಯಾಗಿದ್ದು ತುಂಗಾ ಭದ್ರಾ ಜಲಾಶಯಗಳ ಜೊತೆ ಈ ನೀರು ಸಹ ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರಲು ಸಹಕಾರಿಯಾಗಿದೆ.