ಸಂಜೆವಾಣಿ ವಾರ್ತೆ
ಕುರುಗೋಡು:ಏ.15: ತಾಲೂಕು ಸಮೀಪದ ಮಣ್ಣೂರು ಗ್ರಾಮದ ಬಳಿಯ ತುಂಗಭದ್ರಾ ನದಿ ತಟದಲ್ಲಿರುವ ಹಳೇ ಊರು ಆಂಜಿನೇಯ ದೇವಸ್ಥಾನವು ಗ್ರಾಮಸ್ಥರಿಂದ ಜೀರ್ಣೋದ್ಧಾರ ಕಾರ್ಯ ಜರುಗಿದೆ.
ಪ್ರಾಚೀನ ಕಾಲದಲ್ಲಿ ಇಲ್ಲಿನ ತುಂಗಭದ್ರಾ ನದಿ ತಟದಲ್ಲಿದ್ದ ಮಣ್ಣೂರು ಹಳೇ ಊರಿನಲ್ಲಿ ಉಗಮವಾದ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನವು ನೆರೆ ಹಾವಳಿ ಬಂದು ಹೋದರೂ ತನ್ನ ಸನ್ನಿಧಿಯಿಂದ ಬೇರೆ ಕಡೆ ಸಾಗದೇ ಇರುವುದು ಪವಾಡ.
ಅಕಾಲಿಕ ಮಳೆ ಸುರಿದ ಪರಿಣಾಮ ನೆರೆ ಹಾವಳಿ ಬಂದಿತ್ತು. ಆ ವೇಳೆ ಸಾಕಷ್ಟು ಮನೆ, ಮಠ, ದೇವಸ್ಥಾನಗಳು ನೀರಿನಲ್ಲಿ ಮುಳುಗಿ, ಕುರುಹುಗಳೇ ಸಿಗದೇ ಇಲ್ಲದಂತಾಗಿತ್ತು. ಇಂತಹ ಸಂದರ್ಭದಲ್ಲಿ ಪವಾಡದಂತೆ ಉಳಿದಿದ್ದು ಹಳೇ ಊರಿನ ಆಂಜಿನೇಯ ಸ್ವಾಮಿಯ ದೇವಸ್ಥಾನ.
ನೆರೆ ಹಾವಳಿ ಬರುವ ಮುಂಚಿತವಾಗಿ ಸುಮಾರು ನೂರಾರು ಕುಟುಂಬಗಳು ಹಳೇ ಊರಿನಲ್ಲಿ ವಾಸಿಸುತ್ತಿದ್ದರು. ಆದರೆ, ನೆರೆ ಹಾವಳಿಗೆ ತತ್ತರಿಸಿ, ಒಂದು ಕಿ.ಮೀಟರ್ ದೂರದಲ್ಲಿ ಕುಟುಂಬಗಳು ಸ್ಥಳಾಂತರಗೊಂಡವು ಆದರೆ ಆಂಜಿನೇಯ ಸ್ವಾಮಿ ದೇವಸ್ಥಾನವು ಮಾತ್ರ ಭಕ್ತರಿಂದ ದೂರವಾಗಿಲ್ಲ. ತುಂಗಭದ್ರಾ ನದಿಯ ತಟದಲ್ಲಿ ಆಂಜಿನೇಯ ಸ್ವಾಮಿ ದೇವಸ್ಥಾನ ಇದ್ದರೂ, ಭಕ್ತರ ಭಕ್ತಿ ಮಾತ್ರ ನಿರಂತರವಾಗಿದೆ.
ಭಕ್ತರ ಸಹಕಾರದಿಂದಾಗಿ ಆಂಜಿನೇಯ ಸ್ವಾಮಿ ದೇವಸ್ಥಾನಕ್ಕೆ ಸುಣ್ಣ, ಬಣ್ಣ, ಟೈಲ್ಸ್ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳೊಂದಿಗೆ ಜೀವ ಕಳೆ ಬಂದಿದ್ದು, ಮತ್ತಷ್ಟು ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ. ಸಾಕಷ್ಟು ಭಕ್ತರು ಹಾಗೂ ಜನರು ಹಳೇ ಊರಿನ ಆಂಜಿನೇಯ್ಯ ದೇವಸ್ಥಾನಕ್ಕೆ ಪ್ರತಿ ಶನಿವಾರದಂದು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ ಪುನೀತರಾಗುತ್ತಿದ್ದಾರೆ. ಭಕ್ತರ ಬೇಡಿಕೆ ಹಾಗೂ ಇಷ್ಟರ‍್ಥಗಳನ್ನು ಆಂಜಿನೇಯ ಸ್ವಾಮಿ ದಯ ಪಾಲಿಸುತ್ತಿರುವುದರಿಂದ ಸಾಕಷ್ಟು ಜನರು ಇತ್ತಾ ವಾಲುತ್ತಿದ್ದಾರೆ.