ತುಂಗಭದ್ರಾ ನದಿಪಾತ್ರದಲ್ಲಿ ಮರಳುಗಣಿಗಾರಿಕೆ ತಡೆಗೆ ಮನವಿ

ದಾವಣಗೆರೆ. ಏ.೨೬; ತುಂಗಭದ್ರ ನದಿ ಪಾತ್ರದಲ್ಲಿ ಮರಳುಗಣಿಕಾರಿಕೆಯಿಂದ ಉಂಟಾದ ಗುಂಡಿಗಳು. ನದಿ ದಂಡೆ ಉದ್ದಕ್ಕೂ ಅಲ್ಲಲ್ಲಿ ತೆರೆದ ಬಾವಿಗಳಿದ್ದಂತೆ ನೀರು ತುಂಬಿದ ಗುಂಡಿಗಳು. ನದಿ ದಂಡೆಯಲ್ಲಿರುವ ಹಳ್ಳಿಗಳ ಜನರು ಬಟ್ಟೆ ತೊಳೆಯುವವರು, ಸ್ನಾನ ಮಾಡುವುದು ಹೆಚ್ಚಾಗಿ ನದಿಗಳಲ್ಲಿಯೇ. ಆದರೆ ಅಲ್ಲಿ ಮರಳುಗಾರಿಕೆಯಿಂದ ಉಂಟಾದ ತಗ್ಗುಗಳು ಬಟ್ಟೆ ತೊಳೆಯಲು ಬರುವ ಹೆಣ್ಣುಮಕ್ಕಳಿಗೆ ಮರಣ ಗುಂಡಿಗಳಾಗಿ ಮಾರ್ಪಟ್ಟಿವೆ ಎಂದು  ನದಿ ಪರಿಸರ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪರಿಸರ ಪ್ರೇಮಿ ಡಾ.ಜಿ ಜೆ ಮೆಹೆಂದಳೆ ನುಡಿದರು. ಅತ್ತ ಹಾವೇರಿ ಇತ್ತ ಹರಿಹರದ ಭೂ ಮತ್ತು ಗಣಿಕಾರಿಕೆ ಅಧಿಕಾರಿಗಳಿಗೆ ಇನ್ನು ಬೆಳಗಾದಂತೆ ಕಾಣುತ್ತಿಲ್ಲ. ನದಿಪಾತ್ರದಲ್ಲಿ ಅವ್ಯಾಹತವಾಗಿ ಮರಳುಗಣಿಗಾರಿಕೆ ನಡೆಯುತ್ತಿದೆ. ಹರಿಹರ ಹಾಗೂ ಪಕ್ಕದ ಕುಮಾರಪಟ್ಟಣದ ಸೇತುವೆ ಮೇಲೆ ನಿಂತು ನೋಡಿದರೆ ಅಲ್ಲಲ್ಲಿ ಮರಳು ತೆಗೆಯುತ್ತಿರುವ ದೃಶ್ಯ ಕಂಡುಬರುತ್ತದೆ. ಅಲ್ಲದೇ ನದಿ ದಂಡೆಗಳಲ್ಲಿ ಸಿಮೆಂಟ್ ಚೀಲಗಳಲ್ಲಿ ತುಂಬಿ ರಾತ್ರಿ ವೇಳೆ ಸಾಗಿಸಲು ಗುಂಪು ಗುಂಪಾಗಿ ಇಟ್ಟಿರುವದನ್ನು ಕಾಣಬಹುದು. ಈಗಾಗಲೇ ಗಿಡ ಮರಗಳ ಪ್ರಮಾಣ ಕಡಿಮೆಯಾಗಿರುವುದು ಹಾಗೂ ನದಿಯಿಂದ ಮರಳು ತೆಗೆಯುವದರ ಮೂಲಕ ಕೂಡ ಅಂತರ್ಜಲ ಕಡಿಮೆಯುತ್ತದೆ. ಗಿಡಗಳ ಪ್ರಮಾಣ ಕಡಿಮೆಯಾಗಿ ಈಗ ಹವೆಯಲ್ಲಿ ಆಮ್ಲಜನಕದ ಪ್ರಮಾಣ ಕೂಡಾ ಕಡಿಮೆಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿರುವದರ ಪರಿಣಾಮ ಮಾನವನ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೋರೊನಾ ಎಂಬ ಮಾರಕ ರೋಗಗಳ ಹಬ್ಬುವಿಕೆ ಹೆಚ್ಚಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಆಮಿಷಕ್ಕೆ ಒಳಗಾಗದೇ ಮುಂದಿನ ಪೀಳಿಗೆಗೆ ಸದೃಢವಾಗಿ ಬಾಳಲು ಇರಲು ಅನುವು ಮಾಡಿಕೊಡಬಹುದಾ ಎಂದು ಕಾದು ನೋಡಬೇಕಾಗಿದೆ.  ಶಾಸಕರು ಜನಪ್ರತಿನಿಧಿಗಳು ಈ ಸಂಬಂಧವಾಗಿ  ಗಮನಹರಿಸುವುದು ಅವಶ್ಯವಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.