
ದಾವಣಗೆರೆ, ಫೆ. ೨೭- ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ೭ ಟಿಎಂಸಿ ನೀರು ಹರಿಸುವುದನ್ನು ವಿರೋಧಿಸಿ ಭಾರತೀಯ ರೈತ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು
ನಗರದ ಹಳೇ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇ ಶ್ವರ ದೇವಸ್ಥಾನದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಎಚ್.ಆರ್. ಲಿಂಗರಾಜ್ ಶಾಮನೂರು ಮಾತನಾಡಿ ತುಂಗಭದ್ರಾ ಜಲಾಶಯ ಭಾಗದ ಶಾಸಕರು, ಸಂಸದರು, ಜನ ಪ್ರತಿನಿಧಿಗಳು ತುಂಗಭದ್ರಾ ಜಲಾಶಯಕ್ಕೆ ೭ ಟಿಎಂಸಿ ನೀರು ಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರದ ಮೂಲಕ ನೀರು ಹರಿಸುವ ಆದೇಶ ಹೊರಡಿಸಲು ಇನ್ನಿಲ್ಲದ ಒತ್ತಾಯ ತರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತಗಳ ಪಡೆಯುವ ಗಿಮಿಕ್ ಗಾಗಿ ಈ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾದಲ್ಲಿ ನೀರು ೧೬೮ ಅಡಿ ಇದ್ದು, ಈಗ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. . ಅಣೆಕಟ್ಟೆಯಲ್ಲಿ ಇರುವ ನೀರು ನಮ್ಮ ಬೆಳೆಗೆ ಮಾತ್ರವಿದೆ.. ಇತ್ತ ಅಪ್ಪರ್ ಭದ್ರಾದವರು ನೀರು ಕೇಳುತ್ತಾರೆ. ನಮಗೆ ಸಂಬಂಧವಿಲ್ಲದ ತುಂಗಾಭದ್ರದವರು ಬೆಳೆಗೆ ೭ ಟಿ.ಎಂ.ಸಿ ನೀರು ಕೇಳುತ್ತಾರೆ. ೭ ಟಿಎಂಸಿ ನೀರು ಕೊಟ್ಟರೆ ನಾವು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಸರ್ಕಾರವೇನಾದರೂ ರಾಜಕಾರಣ ಮಾಡಿದರೆ ಮುಂದೆ ಆಗುವ ಅನಾಹುತಕ್ಕೆ ಜನಪ್ರತಿನಿಧಿಗಳೇ ಹೊಣಿಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ನಮ್ಮ ಜಿಲ್ಲೆಯ ಶಾಸಕರು, ಲೋಕಾಸಭಾ ಸದಸ್ಯರು ಎಲ್ಲರೂ ಪಕ್ಷಭೇದ ಮರೆತು ರೈತರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾ ಡ್ಯಾಂ ನಿಂದ ಒಂದು ಹನಿ ನೀರು ಬಿಡದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಎದುರುನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭದ್ರಾದ ಮೇಲೆಯೇ ಈಗ ಎಲ್ಲರ ಕಣ್ಣು ಬಿದ್ದಿದೆ. ಹಿಂದೆ ಭದ್ರಾದತ್ತ ಯಾರೂ ತಲೆ ಹಾಕುತ್ತಿರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಇತರೆಡೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ೨.೫ ಲಕ್ಷ ಎಕರೆ ಪ್ರದೇಶದಲ್ಲಿ ನೀರು ಹರಿಸಲು ಭದ್ರಾ ಜಲಾಶಯದ ವಿನ್ಯಾಸ ಮಾಡಲಾಗಿದೆ. ಇದೇ ರೀತಿಯಲ್ಲಿ ನೀರು ಹರಿಸುತ್ತಾ ಹೋದರೆ ಅಚ್ಚುಕಟ್ಟುದಾರರ ಸ್ಥಿತಿ ಅಭದ್ರವಾಗಲಿದೆ ಎಂದು ತಿಳಿಸಿದರು.