ತುಂಗಭದ್ರಾ-ಕೃಷ್ಣಾವರೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಎನ್.ಹೆಚ್.ಪ್ರಾಧಿಕಾರ ಟೆಂಡರ್

ರಾಯಚೂರು.ನ.೦೭- ನಗರದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದ್ದು, ಕೃಷ್ಣಾ ಸೇತುವೆಯಿಂದ ತುಂಗಭದ್ರಾ ಸೇತುವೆವರೆಗೂ ನಾಲ್ಕು ಮಾರ್ಗಗಳ ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಟೆಂಡರ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ತುಂಗಭದ್ರಾ ನದಿಯಿಂದ ಕೃಷ್ಣಾ ನದಿಯ ತೆಲಂಗಾಣವರೆಗೂ ಈ ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿದೆ. ವಡವಾಟಿ ಮತ್ತು ಬಾಯಿದೊಡ್ಡಿ ಮಧ್ಯೆ ಈ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆಯಲಾಗಿದೆ. ಯಾದಗಿರಿ ಜಿಲ್ಲೆಯ ಕಡೇಚೂರು ಬಳಿ ೩ ಸಾವಿರ ಎಕರೆ ಜಮೀನಿನಲ್ಲಿ ಬೃಹತ್ ಕೈಗಾರಿಕಾ ಕೇಂದ್ರ ನಿರ್ಮಾಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರೀ ಗಾತ್ರದ ವಾಹನಗಳು ಬರುವ ನಿರೀಕ್ಷೆ ಮೇರೆಗೆ ಬೈಪಾಸ್ ಮೂಲಕವೇ ಈ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದು, ಇದರಿಂದ ನಗರದ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯ ಈ ಬೈಪಾಸ್ ರಸ್ತೆಗೆ ನಗರದಿಂದ ಎಲ್ಲೆಡೆ ಸಂಪರ್ಕ ರಸ್ತೆಗಳು ಕಲ್ಪಿಸುವ ಮೂಲಕ ಬೈಪಾಸ್ ರಸ್ತೆಗೆ ಸಂಚಾರ ಸಂಪರ್ಕ ಕಲ್ಪಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ರಸ್ತೆ ನಿರ್ಮಾಣದಿಂದ ಬಹುದಿನಗಳ ನಗರದ ಬೈಪಾಸ್ ರಸ್ತೆ ನಿರ್ಮಾಣ ಸಹಕಾರಗೊಂಡಂತಾಗಿದೆಂದು ಹೇಳಿದರು.
ಬೈಪಾಸ್ ರಸ್ತೆ ನಿರ್ಮಾಣದಿಂದ ನಗರದಲ್ಲಿ ಭಾರೀ ಸಂಚಾರ ಸಮಸ್ಯೆ ನಿವಾರಣೆಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೆಂಡರ್ ಕರೆದಿದ್ದು, ಶೀಘ್ರವೇ ಕಾಮಗಾರಿ ಅನುಷ್ಠಾನಗೊಳ್ಳುವ ನಿರೀಕ್ಷೆಗಳಿವೆ. ಈಗಾಗಲೇ ಹೈದ್ರಾಬಾದ್-ಲಿಂಗಸೂಗೂರು ರಸ್ತೆಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ತುಂಗಭದ್ರಾದಿಂದ ಕೃಷ್ಣಾ ನದಿಗೆ ಏಗನೂರು, ಸಿದ್ರಾಂಪೂರು, ವಡವಾಟಿ, ಮಿಟ್ಟಿಮಲ್ಕಾಪೂರು ಮೂಲಕ ವರ್ತುಲ ರಸ್ತೆ ನಿರ್ಮಾಣ ನಗರಕ್ಕೆ ಶೇ.೭೫ ರಷ್ಟು ವರ್ತುಲ ರಸ್ತೆ ನಿರ್ಮಾಣಗೊಂಡಂತಾಗುತ್ತಿದೆ.
ಲಿಂಗಸೂಗೂರು ರಸ್ತೆಯಿಂದ ರಾಂಪೂರು, ಹೊಸೂರು ಮೂಲಕ ರಾಷ್ಟ್ರೀಯ ಹೆದ್ದಾರಿ ೧೬೭ ಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದರೆ, ಪೂರ್ಣ ಪ್ರಮಾಣದ ವರ್ತುಲ ರಸ್ತೆ ನಿರ್ಮಾಣ ಪೂರ್ಣಗೊಂಡಂತಾಗುತ್ತದೆ.