ತುಂಗಭದ್ರಾ ಎಡದಂಡೆ ಕಾಲುವೆ : ಏಪ್ರೀಲ್ ೧೦ ರವರೆಗೆ ನೀರು

ರಾಯಚೂರು.ನ.೨೪- ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆಯನ್ನಾಧರಿಸಿ, ಎಡದಂಡೆ ಕಾಲುವೆಗೆ ಡಿಸೆಂಬರ್ ೦೧ ರಿಂದ ನಿಗದಿತ ಅವಧಿಗೆ ಅನುಗುಣವಾಗಿ ಏಪ್ರೀಲ್ ೧೦ ರವರೆಗೆ ನೀರು ಹರಿಸುವ ನಿರ್ಧಾರವನ್ನು ಮುನಿರಾಬಾದ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತುಂಗಭದ್ರಾ ಎಡದಂಡೆ ಕಾಲುವೆಗೆ ಡಿಸೆಂಬರ್ ೦೧ ರಿಂದ ೧೫ ರ ವರೆಗೆ ಸರಾಸರಿ ಎರಡು ಸಾವಿರ ಕ್ಯೂಸಕ್, ಡಿಸೆಂಬರ್ ೧೬ ರಿಂದ ಡಿಸೆಂಬರ್ ೩೦ ರವರೆಗೆ ಸರಾಸರಿ ಎರಡುವರೆ ಸಾವಿರ ಕ್ಯೂಸಕ್, ೨೦೨೩ ಜನವರಿ ೦೧ ರಿಂದ ಮಾರ್ಚ್ ೩೧ ರ ವರೆಗೆ ಸರಾಸರಿ ೩೫೦೦ ಕ್ಯೂಸಕ್ ಹಾಗೂ ಕುಡಿವ ನೀರಿಗಾಗಿ ೨೦೨೩ ಏಪ್ರೀಲ್ ೦೧ ರಿಂದ ೧೦ ರವರೆಗೆ ೧೪೮೪ ಕ್ಯೂಸಕ್ ನೀರು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಕಾಲುವೆಗೆ ಡಿಸೆಂಬರ್ ೦೧ ರಿಂದ ಜನವರಿ ೩೧ ರವರೆಗೆ ಸರಿಸುಮಾರು ೯೦೦ ಕ್ಯೂಸಕ್ ನೀರು ಹರಿಸಲಾಗುತ್ತದೆ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ ೦೧ ರಿಂದ ಏಪ್ರೀಲ್ ೫ ರ ವರೆಗೂ ನೀರು ಹರಿಸಲಾಗುತ್ತದೆ. ರಾಯಬಸ್ಸಣ್ಣ ಕಾಲುವೆ, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಭಾಗದವರೆಗೂ ನೀರು ಹರಿಸಲು ತೀರ್ಮಾನಿಸಲಾಗಿದೆಂದು ಸಭೆಯಲ್ಲಿ ಹೇಳಿದರು.