ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣಗೊಳಿಸದಿದ್ದರೆ ಶಾಸಕರಿಗೆ ಗೇರಾವ್ ಎಚ್ಚರಿಕೆ

ರಾಯಚೂರು,ಆ.೧- ತುಂಗಭದ್ರಾ ಎಡದಂಡೆ ಕಾಲುವೆ ೧೩೧ನೇ ಮೈಲಿಯಿಂದ ೧೪೧ನೇ ಮೈಲಿಯವರೆಗೆ ಮುಖ್ಯ ಕಾಲುವೆಯಲ್ಲಿ ವಿಪರೀತವಾಗಿ ಬೆಳೆದಿರುವ ಗಿಡಗಂಟೆಗಳು , ಹೂಳು ತೆಗಿಯಿಸಲು ಹಾಗೂ ಸಿಸಿ ಲೈನ್ ಮಾಡಿ ಮುಖ್ಯ ಕಾಲುವೆ ಆಧುನೀಕರಣಗೊಳಿಸಿ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ,ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್ ರಾಯಚೂರು ಗ್ರಾಮೀಣ ಕ್ಷೇತ್ರ ತಾಲೂಕು ಅಧ್ಯಕ್ಷ ಮಹ್ಮದ್ ನಿಜಾಮುದ್ದೀನ್ ಅಸಮಾಧಾನ ವ್ಯಕ್ತಪಡಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಕಾಲುವೆಯನ್ನು ಆಧುನೀಕರಣಗೊಳಿಸಿದರೆ ಸುಮಾರು ೪೦ ರಿಂದ ೫೦ ಹಳ್ಳಿಗಳಿಗೆ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದ ಅವರು,೨೦೦೬ ರಲ್ಲಿ ಮಾಜಿ ಶಾಸಕ ದಿ. ಮುನಿಯಪ್ಪ ಮುದ್ದಪ್ಪ ಅವರ ಅಧಿಕಾರ ಅವಧಿಯಲ್ಲಿ ನೀರು ಹರಿದಿದೆ ಆದರೆ ಮತ್ತೆ ಇದುವರೆಗೂ ಒಂದು ಹನಿ ನೀರು ಕೂಡ ಹರಿದಿಲ್ಲ.ಇದಕ್ಕೆ ಯರಮರಸ್
ಕರ್ನಾಟಕ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರರು, ಗಿಲ್ಲೇಸೂಗುರು ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂದರು.
ಶಾಸಕ ಬಸನಗೌಡ ದದ್ದಲ್ ಅವರು ತುಂಗಭದ್ರಾ ಎಡದಂಡೆ ಕಾಲುವೆ ಬಗ್ಗೆ ಅಧಿವೇಶನದಲ್ಲಿ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ.ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ.ಚುನಾವಣೆ ಸಮಯದಲ್ಲಿ ನಾನು ಗೆದ್ದರೆ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರನ್ನು ಹರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದರು.ಇದು ಕೇವಲ ಚುನಾವಣೆಯ ಗಿಮಿಕ್ ಆಗಿದೆ.ಯಾಕೆ ಸುಳ್ಳು ಹೇಳಿ ವಂಚನೆ ಮಾಡಿದ್ದೀರಿ ಎಂದರು.
ಶಾಸಕರು ಕೇವಲ ರಸ್ತೆ ಗುದ್ದಲಿ ಪೂಜೆಗೆ ಮಾತ್ರ ಸಿಮಿತರಾಗಿದ್ದಾರೆ.ಮುಂದಿನ ೩ ತಿಂಗಳೊಳಗೆ ತುಂಗಭದ್ರಾ ಎಡದಂಡೆ ಕಾಲುವೆ ಬಗ್ಗೆ ಆಸಕ್ತಿ ತೋರದಿದ್ದರೆ ನಿಮ್ಮ ಮನೆ ಹಾಗೂ ಕಾರ್ಯಾಲಯದ ಮುಂದೆ ವಿವಿಧ ಸಂಘಟನೆ,ರೈತರ ಮುಖಂಡರಗಳೊಂದಿಗೆ ಉಗ್ರವಾದ ಹೋರಾಟ ಮಾಡಿ ನಿಮಗೆ ಗೇರಾವ್ ಹಾಕುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಭಂಡಾರಿ ವಕೀಲ, ಬಂಡೆಸಾಬ್, ವಾಹಿದ್ ಪಾಷ ಸೇರಿದಂತೆ ಇತರರು ಉಪಸ್ಥಿತರಿದ್ದರು.