ತೀವ್ರ ಸ್ವರೂಪ ಸೋಂಕಿತರಿಗೆ ಆಕ್ಸಿಜನ್ ಚಿಕಿತ್ಸೆ

ಕೋವಿಡ್ ಸೋಂಕಿತರೆಲ್ಲರಿಗೂ ಆಸ್ಪತ್ರೆ ದಾಖಲೆ ಅಗತ್ಯವಿಲ್ಲ
ರಾಯಚೂರು.ಏ.೨೦- ಕೋವಿಡ್‌ನಿಂದ ತೀವ್ರ ಅಸ್ವಸ್ಥಗೊಂಡವರು ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಬೇಕು. ಯಾವುದೇ ಲಕ್ಷಣಗಳಿಲ್ಲದವರು ಆಸ್ಪತ್ರೆಗೆ ಬಾರದೇ, ಮನೆಗಳಲ್ಲಿಯೇ ಕ್ವಾರಂಟೈನ್ ಮೂಲಕ ಚಿಕಿತ್ಸೆ ಪಡೆದರೇ ಅಗತ್ಯವಿದ್ದವರಿಗೇ ಹಾಸಿಗೆಗಳ ಕೊರತೆ ಉಂಟಾಗುವುದಿಲ್ಲವೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ತೀವ್ರವಾಗಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಚಿಕಿತ್ಸೆ ವ್ಯವಸ್ಥೆ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಯಾವುದೇ ಲಕ್ಷಣಗಳಿಲ್ಲದ ಮತ್ತು ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡವರಿಗೆ ಚಿಕಿತ್ಸೆ ನೀಡಲು ಯರಮರಸ್ ಸೇರಿದಂತೆ ಇತರೆಡೆ ಕೋವಿಡ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, ಓಪೆಕ್ ಆಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ತೊಂದರೆಗೊಳಗಾದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ.
ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲಿ ಹೋಮ್ ಕ್ವಾರಂಟೈನ್‌ಗೆ ಸಂಬಂಧಿಸಿ ಸ್ಪಷ್ಟ ಮಾಹಿತಿಯಿಲ್ಲದ ಕಾರಣ ಎಲ್ಲರೂ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ, ಈಗ ಯಾವುದೇ ಲಕ್ಷಣವಿಲ್ಲದ ಮತ್ತು ಸಣ್ಣ ಪ್ರಮಾಣದ ಜ್ವರ ಮತ್ತಿತರ ಸಮಸ್ಯೆಗಳಿದ್ದರೇ, ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ವ್ಯವಸ್ಥೆ ಹಿನ್ನೆಲೆಯಲ್ಲಿ ಎಲ್ಲರೂ ಆಸ್ಪತ್ರೆಗೆ ಬರುವುದು ಬೇಡವೆಂದು ಮನವಿ ಮಾಡಿದರು. ಸಣ್ಣ ಪ್ರಮಾಣದ ಪರಿಣಾಮಗಳಿದ್ದವರು ಆಸ್ಪತ್ರೆಗೆ ಬಂದರೇ ವಾಸ್ತವಿಕವಾಗಿ ಆಕ್ಸಿಜನ್ ಅವಶ್ಯಕತೆಯಿದ್ದವರಿಗೆ ಸಮಸ್ಯೆಯಾಗುತ್ತದೆ.
ತೀವ್ರ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟಕ್ಕೆ ಆಸ್ಪತ್ರೆಗಳು ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಹೋಮ್ ಕ್ವಾರಂಟೈನ್ ಮತ್ತು ಕೋವಿಡ್ ಸೆಂಟರ್‌ಗಳಲ್ಲಿ ಕೆಲವರಿಗೆ ಚಿಕಿತ್ಸೆ ನೀಡಿದರೇ, ರೋಗ ಲಕ್ಷಣಗಳು ಗಂಭೀರವಾಗಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ರೆಮ್‌ಡಿಸಿವಿರ್ ಔಷಧಿ ಎಲ್ಲರಿಗೂ ಅಗತ್ಯವಿರುವುದಿಲ್ಲ. ಎಲ್ಲರೂ ಈ ಔಷಧಿ ಪಡೆಯುವ ಅಗತ್ಯವಿಲ್ಲವೆಂದ ಅವರು, ನಗರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಕೊರೊನಾ ಪ್ರಕರಣ ತೀವ್ರವಾಗಿರುವ ಪ್ರದೇಶಗಳಲ್ಲಿ ಕಂಟೊನ್ಮೆಂಟ್ ಮತ್ತು ಮೈಕ್ರೋ ಕಂಟೊನ್ಮೆಂಟ್ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಕೊರೊನಾ ಸೋಂಕು ನಿಯಂತ್ರಿಸಲು ಸಾಧ್ಯವಾಗುತ್ತದೆ. ಮದುವೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಆಯಾ ತಹಶೀಲ್ದಾರರಿಂದ ಪರವಾನಿಗೆ ಕಡ್ಡಾಯವಾಗಿದೆ. ಜಾತ್ರೆ ಮತ್ತಿತರ ಸಾರ್ವಜನಿಕ ಸಮಾರಂಭಗಳನ್ನು ಸಂಪೂರ್ಣ ರದ್ದು ಪಡಿಸಲಾಗಿದೆ. ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ವಹಿಸಲಾಗುತ್ತಿದೆ. ವ್ಯಕ್ತಿಗಳ ಟೆಂಪರೇಚರ್ ಪರಿಶೀಲಿಸಲಾಗುತ್ತದೆ.