ತೀವ್ರ ಸೋಂಕಿತರಲ್ಲಿ ಶೇ.10ರಷ್ಟು ಜನರಿಗೆ ಮಾತ್ರ ಆಕ್ಸಿಜನ್ ಬೇಕು

ಕಲಬುರಗಿ,ಏ.26- ಕೋವಿಡ್-19 ಸೋಂಕಿತರು ಸ್ವಯಂ ಚಿಕಿತ್ಸೆ ಪಡೆಯುವುದನ್ನು ಬಿಟ್ಟು, ಬೇಗ ಟೆಸ್ಟ್‍ಮಾಡಿಸಿಕೊಂಡು ವೈದ್ಯಕೀಯ ಚಿಕಿತ್ಸೆ ಪಡೆದು ಬೇಗನೇ ಗುಣಮುಖರಾಗುವಂತೆ ಡಾ.ಸಂಗ್ರಾಮ ಬಿರಾದಾರ ಮತ್ತು ಡಾ.ಪ್ರತಿಮಾ ಕಾಮರೆಡ್ಡಿ ಇಂದಿಲ್ಲಿ ಹೇಳಿದರು.
ಪತ್ರಿಕಾ ಭವನದಲ್ಲಿಂದು ಆಯೋಜಿಸಿದ್ದ ಕೋವಿಡ್-19 ಎರಡನೆ ಅಲೆ ಬಿಕ್ಕಟ್ಟು ಮತ್ತು ಪರಿಹಾರ ಕುರಿತಾದ ಸಂವಾದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತರೆಲ್ಲರಿಗೂ ಆಕ್ಸಿಜನ್ ಅಗತ್ಯ ಇರುವುದಿಲ್ಲ ಬಹುತೇಕ ಶೇ.90ಕ್ಕಿಂತ ಹೆಚ್ಚಿನ ಸೋಂಕಿತರು ವೈದ್ಯಕೀಯ ಚಿಕಿತ್ಸಯಿಂದ ಗುಣಮುಖರಾಗುತ್ತಾರೆ ಎಂದರು.
ಬೇಗ ಬೇಗ ಸೋಂಕು ಪರೀಕ್ಷೆಗೆ ಒಳಗಾಗುವುದು ಮತ್ತು ಸೋಂಕಿತರು ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಕಡ್ಡಾಯವಾಗಿ ಪಡೆಯುವ ಮೂಲಕ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ. ಸೋಂಕು ತೀವ್ರಗೊಂಡ ನಂತರ ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿಯೇ ಅತಿ ಹೆಚ್ಚಿನ ಸಾವಿನ ಪ್ರಮಾಣ ಕಂಡು ಬರುತ್ತದೆ.
ತೀವ್ರ ಸೋಂಕಿತರ ಪೈಕಿ ಸರಿಸುಮಾರು ಶೇ 10ರಷ್ಟು ಜನರಿಗೆ ಮಾತ್ರ ಆಕ್ಸಿಜನ್ ಅಗತ್ಯ ಇರುತ್ತದೆ ಮತ್ತು ರೆಮಡೆಸಿವಿರ್ ಇಂಜಕ್ಷನ ರೋಗಿಯ ಸ್ಥಿತಿಯನ್ನು ನೋಡಿಕೊಂಡು ವೈದ್ಯರು ನಿರ್ಧರಿಸುತ್ತಾರೆ ವಿನಹ ಜನರಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಹೇಳಿದರು.
ಕೊರೊನಾ ಸೋಂಕಿನ 2ನೇ ಅಲೆಯ ಕುರಿತು ಆತಂಕಕ್ಕೆ ಒಳಗಾಗದೇ ಕೋವಿಡ್-19 ನಿಯಮವಳಿಯನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು, ಸಮಾಜಿಕ ಅಂತರ, ಮಾಸ್ಕ್ ಮತ್ತು ಕೈತೊಳೆದುಕೊಳ್ಳುವುದು ಮುಂದುವರೆಸಬೇಕು ಎಂದು ಅವರು ಸಲಹೆ ನೀಡಿದರು.