ತೀವ್ರ ಬರಗಾಲದ ಪರಿಣಾಮ ಕುಡಿಯುವ ನೀರಿಗೆ ಹಾಹಾಕಾರ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.04: ತೀವ್ರ ಬರಗಾಲದ ಸುಳಿಗೆ ತಾಲೂಕಿನ ಗ್ರಾಮೀಣ ಪ್ರದೇಶಗಳು ತುತ್ತಾಗಿದ್ದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮಳೆಯಿಲ್ಲದೆ ತಾಲೂಕಿನ ಕೆರೆ-ಕಟ್ಟೆಗಳು ಬರಿದಾದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು ಗ್ರಾಮಿಣ ಕುಡಿಯುವ ನೀರು ಪೂರೈಕೆ ಗ್ರಾಮ ಪಂಚಾಯತಿಗಳಿಗೆ ಬಹುದೊಡ್ಡ ಸವಾಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನದಿ ಅಂಚಿನ ಅಕ್ಕಿಹೆಬ್ಬಾಳು, ಕಸಬಾ ಮತ್ತು ಕಿಕ್ಕೇರಿ ಹೋಬಳಿಯ ಕೆಲವು ಭಾಗಗಳು ಹೇಮೆಯ ನೀರನ್ನು ಅವಲಂಭಿಸಿದ್ದರೆ ಉಳಿದಂತೆ ಕೆಲವು ಪ್ರದೇಶಗಳು ಹೇಮಾವತಿ ಜಲಾಶಯದ ಎಡದಂಡೆ ನಾಲೆಯಿಂದಾಗಿ ಅರೆ ನೀರಾವರಿಗೆ ಒಳಪಟ್ಟಿವೆ. ಸಂತೇಬಾಚಹಳ್ಳಿ, ಶೀಳನೆರೆ ಹಾಗೂ ಬೂಕನಕೆರೆ ಹೋಬಳಿಗಳು ಸಂಪೂರ್ಣ ಮಳೆಯಾಶ್ರಿತವಾಗಿವೆ. ಹೇಮೆಯ ನೀರಿನಿಂದ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸುತ್ತಿದ್ದ ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿರಲಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಹೇಮೆಯ ನೀರು ತಾಲೂಕಿನ ಕೆರೆ-ಕಟ್ಟೆಗಳಿಗೆ ಹರಿಯಲಿಲ್ಲ. ಪರಿಣಾಮ ಅಂತರ್ಜಲ ಮಟ್ಟ ಕುಸಿದು ಗ್ರಾಮಿಣ ಪ್ರದೇಶದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲ ಸಂಕಷ್ಠಕ್ಕೆ ಸಿಲುಕಿದೆ.
ತಾಲೂಕಿನಲ್ಲಿ 34 ಗ್ರಾಮ ಪಂಚಾಯತಿಗಳಿದ್ದು ಸರ್ಕಾರಿ ಮಾಹಿತಿಯಂತೆ ಪ್ರಸ್ತುತ 14 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರವಾದ ಸಮಸ್ಯೆ ಎದುರಾಗಿದೆ. ತಾಲೂಕಿನ ಮುರುಕನಹಳ್ಳಿ, ಐಕನಹಳ್ಳಿ, ಶೀಳನೆರೆ, ಆನೆಗೊಳ, ಐಚನಹಳ್ಳಿ, ತೆಂಡೇಕೆರೆ, ಗಂಜೀಗೆರೆ,ಮಡುವಿನಕೋಡಿ, ರಂಗನಾಥಪುರ, ಚೌಡೇನಹಳ್ಳಿ, ಮಂದಗೆರೆ, ವಿಠಲಾಪುರ, ದಬ್ಬೇಘಟ್ಟ, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಗ್ರಾ.ಪಂ ವತಿಯಿಂದ ಹೊಸ ಬೋರ್ ವೆಲ್ ಗಳನ್ನು ಕೊರೆಸಿದರೂ ಅಂತರ್ಜಲ ಕುಸಿತದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಗ್ರಾಮ ಪಂಚಾಯತಿ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ತೀವ್ರ ಅಭಾವ ಇರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮದ ಜನಸಂಖ್ಯೆಯನ್ನು ಆಧರಿಸಿ ದೊಡ್ಡ ದೊಡ್ಡ ಗ್ರಾಮಗಳಿಗೆ ಬೆಳಿಗ್ಗೆ ಮತ್ತು ಸಂಜೆ ಹಾಗೂ ಪುಟ್ಟ ಗ್ರಾಮಗಳಿಗೆ ಒಂದು ಟ್ಯಾಂಕರ್‍ನಂತೆ ನಿತ್ಯ ನೀರು ಪೂರೈಕೆ ಮಾಡಲಾಗುತ್ತಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮ ಪಂಚಾಯತಿಗಳ ಮುಂದೆ ಪ್ರತಿಭಟನೆಗಳು ಆರಂಭಗೊಂಡಿವೆ.
ರಾಜ್ಯ ಸರ್ಕಾರ ಒಂದು ಟ್ಯಾಂಕರ್ ನೀರು ಪೂರೈಕೆಗೆ 800 ? 850 ರೂ ನಿಗಧಿ ಪಡಿಸಿದೆ. ಗ್ರಾಮೀಣ ಪ್ರದೇಶದ ರೈತಾಪಿ ಸಮುದಾಯ ಜನ-ಜಾನುವಾರುಗಳೊಂದಿಗೆ ಬದುಕು ಸಾಗಿಸುತ್ತದೆ. ಗ್ರಾಮ ಪಂಚಾಯತಿ ಪೂರೈಕೆ ಮಾಡುತ್ತಿರುವ ನೀರು ಜನರಿಗೇ ಸಾಕಾಗುತ್ತಿಲ್ಲ. ಜೊತೆಗೆ ಟ್ಯಾಂಕರ್ ನೀರಿನ ಶುದ್ದತೆಯನ್ನು ಪರಿಸೀಲಿಸುತ್ತಿಲ್ಲ. ರೈತರ ಜಾನುವಾರುಗಳು ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿವೆ. ಜನರ ಜೊತೆಗೆ ಜಾನುವಾರುಗಳ ಕುಡಿಯುವ ನೀರಿಗೂ ರಾಜ್ಯ ಸರ್ಕಾರ ಕ್ರಮವಹಿಸಬೇಕು. ಗ್ರಾಮಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿ ಎಮ್ಮೆ ದನಗಳ ನೀರಿನ ದಾಹವನ್ನು ತಣಿಸುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.
ಬೋರ್ ಕೊರೆಯುವ ಯಂತ್ರಗಳಿಗೂ ಅಭಾವ: ತೀವ್ರ ಬರಗಾಲದಿಂದ ತಮ್ಮ ಬೆಳೆ ಉಳಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿರುವ ರೈತರು ತಮ್ಮ ತಮ್ಮ ಜಮೀನಿಗಳಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಸಲು ಆರಂಭಿಸಿದ್ದಾರೆ. ಅಂತರ್ಜಲ ಮಟ್ಟ ಸಾವಿರ ಅಡಿ ಆಳಕ್ಕೆ ತಲುಪಿದ್ದರೂ ರೈತರು ಮಾತ್ರ ಹಠ ಬಿಡದೆ ಬೋರ್ ಕೊರೆಸುತ್ತಲೇ ಇದ್ದಾರೆ. ಇದರ ಪರಿಣಾಮ ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಹೊಸ ಬೋರ್ ಕೊರೆಸಲು ಬೋರ್ ಕೊರೆಯುವ ಯಂತ್ರಗಳೇ ಸಿಗುತ್ತಿಲ್ಲ. ಬೋರ್ ಕೊರೆಯುವ ಯಂತ್ರಗಳ ಮಾಲೀಕರ ಬಳಿ ಪಿ.ಡಿ.ಓ ಗಳು ಅಂಗಲಾಚಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ಹೊಸದಾಗಿ ಕೊರೆಯುವ ಬೋರ್‍ವೆಲ್ ಗಳ ಮಿತಿಯನ್ನು ಸರ್ಕಾರ 500 ಅಡಿಗೆ ಮಿತಿಗೊಳಿಸಿದೆ. ಬಹುತೇಕ ಕಡೆ 500 ಅಡಿ ಕೊರೆದರೂ ನೀರು ಬರದೆ ಬೋರ್ ವೆಲ್ ಗಳು ವಿಫಲವಾಗುತ್ತಿವೆ. ಇದೂ ಕೂಡ ಗ್ರಾಮಿಣ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ.