ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ

ಧಾರವಾಡ, ಜು.29: ಜಿಲ್ಲೆಯ ಐದು ವರ್ಷದೊಳಗಿನ 2,13,000 ಮಕ್ಕಳಿಗೆ ಆಗಸ್ಟ್ 1 ರಿಂದ 15 ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು ವಾರವನ್ನು ಆಚರಿಸಲಾಗುತ್ತಿದ್ದು, ಈ ಪಾಕ್ಷಿಕ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಸಂದರ್ಭದಲ್ಲಿ ಐದು ವರ್ಷದೊಳಗಿನ ಪ್ರತಿ ಮಗುವಿನ ಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಒಂದು ಪಾಕೇಟ್ ಓಆರ್‍ಎಸ್ ಮತ್ತು ಭೇಟಿ ನೀಡಿದ ಮನೆಯಲ್ಲಿ ಮಗುವಿಗೆ ಭೇದಿ ಆಗುತ್ತಿದ್ದರೆ ಒಂದು ಜಿಂಕ್ ಮಾತ್ರೆಯನ್ನು ನೀಡುತ್ತಾರೆ. ಹಾಗೂ ಮಗುವಿಗೆ ಅತಿಸಾರ ಭೇದಿ ಉಂಟಾದಾಗ ತಕ್ಷಣ ಆರೈಕೆಗಾಗಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಿಳಿಸಿಕೊಡಲಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ, ಶಾಲಾ ಮಕ್ಕಳಿಗೆ ಲಸಿಕಾಕರಣ ನೀಡುವ ಕಾರ್ಯ ಯೋಜಿತ ರೀತಿಯಲ್ಲಿ ನಡೆಯಬೇಕು. ಲಸಿಕಾಕರಣದಿಂದ ಯಾವ ಒಂದು ಮಗುವೂ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಕಾರ್ಯದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗುವುದು.

ಜಿಲ್ಲೆಯಲ್ಲಿ ಆಗಸ್ಟ್ 10 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ವಿವಿಧ ಕಾರಣಗಳಿಂದಾಗಿ ಮಕ್ಕಳಿಗೆ ಬರುವ ಗೊಬ್ಬರ ಖಾಯಿಲೆಯನ್ನು ನಿಯಂತ್ರಿಸಲು ಮಗುವಿಗೆ 9 ತಿಂಗಳು ಪೂರ್ಣವಾದಾಗ ಪ್ರಥಮ ಡೋಸ್ ಹಾಗೂ 16 ರಿಂದ 24 ತಿಂಗಳೊಳಗಾಗಿ 2 ನೇಯ ಡೋಸ್ ನೀಡಬೇಕು. ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ನೀಡುತ್ತಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ.ಕರಿಗೌಡರ ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅಧಿಕಾರಿಗಳಾದ ಆರ್‍ಸಿಹೆಚ್‍ಓ ಡಾ.ಎಸ್.ಎಂ ಹೊನಕೇರಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮಂಜುನಾಥ ಸೊಪ್ಪಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಬಿ ಕಳಸೂರಮಠ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ ಎಂ. ನಿಂಬಣ್ಣವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರು, ಜಿಲ್ಲಾ ಆಸ್ಪತ್ರೆಯ ಆರ್‍ಎಂಓ ಡಾ.ಮಹೇಂದ್ರ ಕಾಪಸೆ, ಕಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ವೈದ್ಯ ಡಾ.ಕಸ್ತೂರಿ ದೋಣಿಮಠ ಮತ್ತು ಡಾ.ಪ್ರಕಾಶ ವಾಲಿ ಅವರು ವಿವಿಧ ಆರೋಗ್ಯ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಪ್ರಗತಿ ಮಂಡಿಸಿದರು.

ಸಭೆಯಲ್ಲಿ ಜಿಲ್ಲಾಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಟಿ.ಎ.ಶೆಪೂರ, ಡಾ.ನಾಡಗೌಡ, ಡಿಐಸಿಯ ಡಾ.ಅಂಗಡಿ ಹಾಗೂ ಎಲ್ಲ ತಾಲೂಕಾ ವೈದ್ಯಾಧಿಕಾರಿಗಳು, ಆರ್‍ಎಂಓ ಗಳು, ತಾಲೂಕಾ ಶಿಶುಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.