ತಿ.ನರಸೀಪುರ ಪುರಸಭೆ : ಸೋಮು ಅಧ್ಯಕ್ಷ, ಪ್ರೇಮಾ ಮರಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

ತಿ.ನರಸೀಪುರ.ನ .10: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು ಹೆಳವರಹುಂಡಿ ಸೋಮು ಅಧ್ಯಕ್ಷರಾಗಿ, ಪ್ರೇಮಾ ಮರಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಗೊಂಡರು.
ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂಬಂಧ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಮು ಹಾಗು ಪ್ರೇಮಾ ಮರಯ್ಯ,ಬಿಜೆಪಿಯಿಂದ ಎಸ್.ಕೆ.ಕಿರಣ್ ಹಾಗು ಬಿಜೆಪಿ ಬೆಂಬಲಿತ ಅಭ್ಯರ್ಥಿ ತೇಜಸ್ವಿನಿ ಕ್ರಮವಾಗಿ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು.
ಆದರೆ ನಾಮಪತ್ರ ವಾಪಸ್ ಪಡೆಯಲು ನಿಗದಿ ಪಡಿಸಿದ್ದ ಸಮಯದಲ್ಲಿ ಕಿರಣ್ ಹಾಗು ತೇಜಸ್ವಿನಿ ತಮ್ಮ ನಾಮಪತ್ರ ವಾಪಸ್ ಪಡೆದು ಕೊಂಡ ಹಿನ್ನೆಲೆಯಲ್ಲಿ ಸೋಮು ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ ಪ್ರೇಮಾ ಮರಯ್ಯ ಅವಿರೋಧವಾಗಿ ಆಯ್ಕೆಗೊಂಡರು.
ಈ ಮೊದಲು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಎಸ್.ಕೆ.ಕಿರಣ್ ತೀವ್ರವಾದ ಪೈಪೆÇೀಟಿ ನಡೆಸಿದ್ದರಾದರೂ ಇಂದು ನಾಮ ಪತ್ರ ಸಲ್ಲಿಸಿ ವಾಪಸ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು.ಕಾಂಗ್ರೆಸ್ ಪಕ್ಷದಲ್ಲೂ ಅಧ್ಯಕ್ಷ ಸ್ಥಾನಕ್ಕೆ ತೀವ್ರವಾದ ಲಾಭಿ ಏರ್ಪಟ್ಟು ಕೊನೆ ಗಳಿಗೆವರೆಗೂ ಅಭ್ಯರ್ಥಿ ಯ ಆಯ್ಕೆಯಲ್ಲಿ ಗೊಂದಲ ಉಂಟಾಗಿತ್ತು.ಕಾಂಗ್ರೆಸ್ ಪಕ್ಷದ ಮದನ್ ರಾಜ್, ಪ್ರೇಮಾ ಮರಯ್ಯ ಹಾಗು ಸೋಮು ರವರಲ್ಲಿ ಯಾರು ಅಭ್ಯರ್ಥಿಯಾಗಬೇಕೆಂಬ ಬಗ್ಗೆ ಗೊಂದಲ ಉಂಟಾಗಿತ್ತು.ಅಲ್ಲದೆ ಮತ್ತೊಬ್ಬ ಕಾಂಗ್ರೆಸ್ ನ ಅಭ್ಯರ್ಥಿ ಟಿ.ಎಂ.ನಂಜುಂಡಸ್ವಾಮಿ ತೀವ್ರವಾಗಿ ಅಧ್ಯಕ್ಷ ಸ್ಥಾನಕ್ಕೆ ಲಾಭಿಗೆ ಮುಂದಾಗಿದ್ದರಾದರೂ ಇಂದು ಪಕ್ಷದ ಹೈ ಕಮಾಂಡ್ ಅಂತಿಮವಾಗಿ ಸೋಮು ಹೆಸರನ್ನು ಸೂಚಿಸಿ ಗೊಂದಲಕ್ಕೆ ತೆರೆ ಎಳೆಯಿತು.
ಚುನಾವಣಾಧಿಕಾರಿ ತಹಶೀಲ್ದಾರ್ ಡಿ.ನಾಗೇಶ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟಿಸಿದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಧರ್ಮ ಸೇನಾ ,ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ಹಾಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್.ಮಂಜುನಾಥ್ ಪುರಸಭೆಗೆ ಆಗಮಿಸಿ ಅಭಿನಂಧಿಸಿದರು.
ಸೋಮು ಹಾಗು ಪ್ರೇಮಾಮರಯ್ಯ ಆಯ್ಕೆ ಯಾಗುತ್ತಿದ್ದಂತೆ ಪುರಸಭಾ ಕಚೇರಿ ಎದುರು ನೆರೆದಿದ್ದ ನೂರಾರು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ನೂತನ ಅಧ್ಯಕ್ಷ ಸೋಮು ಮಾತನಾಡಿ ತನ್ನ ಆಯ್ಕೆಗೆ ಕಾರಣ ಕರ್ತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ,ಮಾಜಿ ಸಂಸದ ಧೃವನಾರಾಯಣ್,ವಿಧಾನ ಪರಿಷತ್ ಸದಸ್ಯ ಧರ್ಮಸೇನಾ,ಸುನೀಲ್ ಬೋಸ್ ಹಾಗು ಎರಡೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.ಪಟ್ಟಣದ ಸಮಗ್ರ ಅಭಿವೃದ್ಧಿ ಗೆ ಶ್ರಮಿಸುವ ಮೂಲಕ ತಮ್ಮ ಮೇಲೆ ವಿಶ್ವಾಸವಿಟ್ಟು ನನಗೆ ಉನ್ನತ ಸ್ಥಾನ ನೀಡಿರುವ ವರಿಷ್ಠರ ಹೆಸರಿಗೆ ಕಪ್ಪು ಚುಕ್ಕೆ ಬರದಂತೆ ಕರ್ತವ್ಯ ನಿರ್ವಹಿಸುತ್ತೇನೆ.ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ ಘಟಕ,ಒಳ ಚರಂಡಿ ಯೋಜನೆಗಳ ವೇಗ ಹೆಚ್ಚಿಸಿ ಪಟ್ಟಣದ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ.ಸಹೋದ್ಯೋಗಿಗಳ ಸಹಕಾರ ಹಾಗು ಮಾರ್ಗರ್ಶನದಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯರಾದ ಬಾದಾಮಿ ಮಂಜು,ಎಸ್.ಮದನ್ ರಾಜ್, ಮೆಡಿಕಲ್ ನಾಗರಾಜು,ಮಹದೇವಮ್ಮ,ಬೇಬಿ ಹೇಮಂತ್, ನಾಗರತ್ನ ಮಾದೇಶ್, ರಾಜೇಶ್ವರಿ,ವಿ.ಮೋಹನ್,ಸಿಸ್ಟಮ್ ಸಿದ್ದು,ತುಂಬಲಾ ಪ್ರಕಾಶ್, ಸೈಯದ್‍ಅಹ್ಮದ್,ವಸಂತ,ರೂಪಾ,ರೂಪಾ ಪರಮೇಶ್, ಶೋಭಾ ರಾಣಿ,ಮುಖಂಡರಾದ ಪಿ.ಸ್ವಾಮಿನಾಥನ್, ಎಪಿಎಂಸಿ ಅಧ್ಯಕ್ಷ ಅನಿಲ್ ಕುಮಾರ್,ಎನ್.ಎಸ್.ಬಸವರಾಜು, ಬಸವಣ್ಣ,ಮಸ್ರೂರ್,ಮಲ್ಲಿಕಾರ್ಜುನ ಸ್ವಾಮಿ,ವಾಟಾಳ್ ನಾಗೇಶ್. ಮನ್ನೇಹುಂಡಿ ಮಹೇಶ್, ಮನ್ಸೂರ್ ಆಲಿ,ಎಂ.ಕೆ.ಸಹದೇವ,ಅಮಾಸೆ ಲಿಂಗರಾಜು, ಎ.ಜೆ.ವೆಂಕಟೇಶ, ಪಿ.ಪುಟ್ಟರಾಜು,ಆಲಗೂಡು ನಾಗರಾಜು,ಘಟಕ ಮಹದೇವು ಮತ್ತಿತರರಿದ್ದರು.