ತಿಹಾರ್ ಜೈಲಿನ 52 ಮಂದಿ ಕೈದಿಗಳಿಗೆ ಕೊರೊನಾ

ನವದೆಹಲಿ, ಏ.13-ಇಲ್ಲಿನ ತಿಹಾರ್ ಜೈಲಿನ 52 ಕೈದಿಗಳಿಗೆ ಕೋವಿಡ್ ಸೋಂಕು ತಗುಲಿದ್ದು, ಜೈಲಿನ ಒಂದು ಕಾಂಪ್ಲೆಕ್ಸ್​ ಅನ್ನು ಸೀಲ್​ಡೌನ್ ಮಾಡಲಾಗಿದೆ. ದೇಶದಲ್ಲಿ ಅತಿಹೆಚ್ಚು ಕೈದಿಗಳಿರುವ ಬೃಹತ್ ಕಾರಾಗೃಹವಾಗಿರುವ ತಿಹಾರ್ ಜೈಲಿನ 52 ಕೊರೋನಾ ಸೋಂಕಿತ ಕೈದಿಗಳ ಪೈಕಿ 35 ಕೈದಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೇವಲ ಕೈದಿಗಳು ಮಾತ್ರವಲ್ಲದೆ ಜೈಲಿನ ವೈದ್ಯರು ಸೇರಿದಂತೆ ಒಟ್ಟು 7 ಜೈಲಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿದೆ. ಈ ಜೈಲಿನ ಸಾಮರ್ಥ್ಯ 10 ಸಾವಿರ. ಆದರೆ, ಸದ್ಯಕ್ಕೆ ತಿಹಾರ್ ಜೈಲಿನಲ್ಲಿ ಒಟ್ಟು 20 ಸಾವಿರ ಕೈದಿಗಳಿದ್ದಾರೆ. ಹೀಗಾಗಿ, ಉಳಿದ ಕೈದಿಗಳಿಗೂ ಕೊರೋನಾ ಹರಡುವ ಆತಂಕ ಎದುರಾಗಿದೆ.

ಏಪ್ರಿಲ್ 6ರವರೆಗೆ ತಿಹಾರ್ ಜೈಲಿನಲ್ಲಿ 19 ಕೊರೋನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದವು. ಆದರೆ, ಕಳೆದೊಂದು ವಾರದಿಂದ ಈ ಸಂಖ್ಯೆ 52ಕ್ಕೆ ಏರಿಕೆಯಾಗಿದ್ದು, 7 ಅಧಿಕಾರಿಗಳಿಗೆ ಸೋಂಕು ಕಾಣಿಸಿಕೊಂಡಿದೆ.

ಸೋಂಕಿತರ ಪೈಕಿ ಮೂವರು ಕೈದಿಗಳ ಸ್ಥಿತಿ ಚಿಂತಾಜನಕವಾಗಿದೆ. 32 ಕೈದಿಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 17 ಕೈದಿಗಳನ್ನು ಜೈಲಿನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಇನ್ನು 7 ಕೈದಿಗಳನ್ನು ಜೈಲಿನಿಂದ ಹೊರಗೆ ಕ್ವಾರಂಟೈನ್ ಮಾಡಲಾಗಿದೆ.