ತಿಲಕ್ ನಗರ ಪೊಲೀಸರಿಂದ ಅಹವಾಲುಗಳಿಗೆ ಪರಿಹಾರ

ಬೆಂಗಳೂರು, ಮಾ.೨೧-ತಿಲಕ್ ನಗರ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಯನ್ನು ಮಾಡುವುದನ್ನು ರದ್ದುಗೊಳಿಸಿ ಒಂದು ಬದಿಯಲ್ಲಿ ವ್ಯವಸ್ಥಿತ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವುದು ಸೇರಿ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಸಲ್ಲಿಸಿದ ದೂರುಗಳನ್ನು ಬಹುತೇಕ ಬಗೆಹರಿಸಲಾಗಿದೆ.
ಕಳೆದ ಡಿ.೨೬ರಂದು ತಿಲಕ್ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಠಾಣೆಯ ಮುಂಭಾಗದ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ
ತೊಂದರೆಯ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮುಂದೆ ಪಳನಿ ಎಂಬುವರು ಅಹವಾಲು ಸಲ್ಲಿಸಿದ್ದರು.
ಅಹವಾಲನ್ನು ಗಂಭೀರವಾಗಿ ಪರಿಗಣಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು ಅದರಂತೆ ತಿಲಕ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಗಿರೀಶ್ ಅವರು ಕ್ರಮ ಕೈಗೊಂಡು ರಸ್ತೆಯ ಎರಡು ಬದಿಯಲ್ಲಿನ ವಾಹನಗಳ ನಿಲುಗಡೆಯನ್ನು ಸಂಚಾರ ಪೊಲೀಸರ ಜೊತೆ ಚರ್ಚೆ ನಡೆಸಿ ನಿಷೇಧಿಸಿ ವ್ಯವಸ್ಥಿತ ವಾಹನ ನಿಲುಗಡೆಯನ್ನು ಜಾರಿಗೊಳಿಸಿದ್ದಾರೆ.
ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ಠಾಣೆಯ ಮುಂಭಾಗ ಯಾವುದೇ ತೊಂದರೆಯಾಗದಂತೆ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೇ ಪಳನಿ ಅವರು ಸಲ್ಲಿಅಇದ ಅಹವಾಲುವಿನಂತೆ ಠಾಣೆಯ ವ್ಯಾಪ್ತಿಯಲ್ಲಿ ರೌಡಿ ಪೆರೇಡ್ ನಡೆಸಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲಾಗಿದೆ ಎಂದು ಠಾಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಇದಲ್ಲದೇ ಸಾರ್ವಜನಿಕರು ವಾಹನ ಕಳವು ಮನೆಕಳವು ಸೇರಿದಂತೆ ಇತರೆ ಅಪರಾಧ ಕೃತ್ಯ ಗಳ ಸಂಬಂಧ ಮಾಸಿಕ ಸಭೆಯಲ್ಲಿ ಸಲ್ಲಿಸಿದ್ದ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.