ತಿರುವಣ್ಣಾಮಲೈ ಬಳಿ ಅಪಘಾತ; ಕರ್ನಾಟಕ ಪೊಲೀಸ್ ಅಸಿಸ್ಟೆಂಟ್ ಕಮಾಂಡೆಂಟ್ ಸಾವು

ಬೆಂಗಳೂರು,ಏ.12-ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಹೋಗುತ್ತಿದ್ದ ಐವರು ಪೊಲೀಸರಿದ್ದ ಜೀಪ್‌ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಬಸ್‌ಗೆ ಡಿಕ್ಕಿ ಹೊಡೆದು ಕರ್ನಾಟಕದ ಅಧಿಕಾರಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಇಂದು ಸಂಜೆ ನಡೆದಿದೆ.


ಕರ್ನಾಟಕದ ಪೊಲೀಸ್ ಅಧಿಕಾರಿ, ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್ ಹಾಗೂ ತಮಿಳುನಾಡು ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟವರು.


ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಇಬ್ಬರ ಮೃತದೇಹಗಳನ್ನು ತಮಿಳುನಾಡಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕರ್ನಾಟಕ ಪೊಲೀಸರಿಗೆ ಹಸ್ತಾಂತರ ಮಾಡಲಾಗುವುದು. ಮೃತಪಟ್ಟಿರುವ ಬಗ್ಗೆ ಪ್ರಭಾಕರ್ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಕಿಲ್ಪೆನ್ನತುರ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಸ್ ಮತ್ತು ಜೀಪ್‌ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಜೀಪ್‌ ಛಿದ್ರವಾಗಿದ್ದು, ಬಸ್‌ನ ಮುಂಭಾಗ ಸಹ ದೊಡ್ಡ ಪ್ರಮಾಣದಲ್ಲಿ ಜಖಂ ಆಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹೇಮಂತ್ ಕುಮಾರ್ (ಡೆಪ್ಯೂಟಿ ಕಮಾಂಡರ್), ವಿಟ್ಠಲ್ ಗಡಾದರ್ (ಹೆಡ್ ಕಾನ್ಸ್‌ಟೇಬಲ್), ಜಯಕುಮಾರ್ (ಕಾನ್ಸ್‌ಟೇಬಲ್) ಮೂವರನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.