ತಿರುಮಲದಲ್ಲಿ 3 ಚಿರತೆಗಳು ಸೆರೆ

ಕೋಲಾರ,ಆ,೧೮:ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಚಿರತೆಯೊಂದನ್ನು ಸೆರೆ ಹಿಡಿಯಲಾಗಿದೆ. ಆಂದ್ರ ಪ್ರದೇಶದ ಅರಣ್ಯ ಇಲಾಖೆಗೆ ಸೇರಿದ ಈ ಪ್ರದೇಶದಲ್ಲಿ ಸೆರೆ ಹಿಡಿದಿರುವ ೩ನೇ ಚಿರತೆ ಇದಾಗಿದೆ.
ತಿರುಪತಿಯಿಂದ ತಿರುಮಲಕ್ಕೆ ಹೋಗುವ ದಾರಿಯಲ್ಲಿ ಇರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದ ಸಮೀಪ ಈ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ೩ ದಿನಗಳ ಅಂತರದಲ್ಲಿ ಸೆರೆ ಹಿಡಿಯಲಾಗುತ್ತಿರುವ ೩ನೇ ಚಿರತೆ ಇದಾಗಿದೆ.
ಇದಕ್ಕು ಮುನ್ನ ಸೆರೆ ಹಿಡಿದಿದ್ದ ೨ನೇ ಚಿರತೆಯು ಇದೇ ರೀತಿ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲದ ಸಮೀಪವೇ ಅರಣ್ಯ ಇಲಾಖೆಯು ಇರಿಸಿದ್ದ ಬೋನಿನ ಬಲೆಗೆ ಬಿದ್ದಿತ್ತು. ಈಗ ಹಿಡಿದಿರುವ ಚಿರತೆಯು ಗಂಡು ಚಿರತೆಯಾಗಿದ್ದು ಸುಮಾರು ೫ ವರ್ಷ ವಯಸ್ಸಿನದಾಗಿದೆ ಎಂದು ತಿರುಪತಿ ವಿಭಾಗೀಯ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸಲು ತಿಳಿಸಿದ್ದಾರೆ.
ಸೆರೆ ಹಿಡಿಯಲಾಗಿರುವ ಚಿರತೆಯನ್ನು ತಿರುಪತಿ ಮೃಗಾಲಯದಲ್ಲಿ ೧೦ ದಿನಗಳ ಕಾಲ ಗ್ವಾರಂಟೈನ್‌ನಲ್ಲಿ ಇಡಲಾಗುವುದು, ಮಾನವ ಮಾಂಸ ಭಕ್ಷಣೆ ಮಾಡಿದ್ದರ ಬಗ್ಗೆ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗುವುದು ಎಂದಿದ್ದಾರೆ.
ಏತನ್ಮಧ್ಯೆ ೨ನೇ ಚಿರತೆಯ ಡಿ.ಎನ್.ಎ. ವರದಿಗೆ ಕಾಯಲಾಗುತ್ತಿದೆ. ಈ ಹಿಂದೆ ತಿರುಮಲ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ ೬ ವರ್ಷದ ಬಾಲಕಿ ಮೇಲೆ ದಾಳಿ ಮಾಡಿ ಚಿರತೆಯು ಕೊಂದಿತ್ತು, ಹಾಗಾಗಿ ತಿರುಮಲಕ್ಕೆ ಹೋಗುವ ಪ್ರದೇಶದಲ್ಲಿ ಪ್ರಾಣಿಗಳ ಸಂಚಾರದ ಬಗ್ಗೆ ಅರಣ್ಯ ಇಲಾಖೆ ನಿಗಾವಹಿಸಲಾಗುವುದು ಎಂದು ಶ್ರೀನಿವಾಸಲು ತಿಳಿಸಿದ್ದಾರೆ.