ತಿರುಪತಿ ಮಾದರಿಯಲ್ಲಿ ಧಾರ್ಮಿಕ ಕ್ಷೇತ್ರವನ್ನಾಗಿಸಲು ಸಂಕಲ್ಪ: ಶಿವಣ್ಣವನರ

ಬ್ಯಾಡಗಿ,ಜೂ19 : ದಾಸಶ್ರೇಷ್ಠ ಕನಕದಾಸರಿಗೆ ತಿರುಪತಿ ತಿಮ್ಮಪ್ಪನು ದರ್ಶನ ನೀಡಿದ ಕದರಮಂಡಲಗಿ ಗ್ರಾಮವನ್ನು ತಿರುಪತಿ ಮಾದರಿಯಂತೆ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡುವ ಮಹದಾಸೆಯನ್ನು ಹೊಂದಿರುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಕದರಮಂಡಲಗಿ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲೆಯ ಕಾಂಗ್ರೆಸ್ ಚುನಾಯಿತ ಐವರು ಶಾಸಕರಿಗೆ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಕದರಮಂಡಲಗಿ ಗ್ರಾಮದಲ್ಲಿರುವ ತಿರುಪತಿ ತಿಮ್ಮಪ್ಪನ ದೇಗುಲವನ್ನು ಭವ್ಯವಾಗಿ ನಿರ್ಮಿಸುವ ಸಂಕಲ್ಪವನ್ನು ಹೊಂದಿದ್ದು, ಇದರ ಜೊತೆಗೆ ಪ್ರವಾಸಿ ಮಂದಿರ, ವಸತಿ ನಿಲಯ ಹಾಗೂ ಬಸ್ ನಿಲ್ದಾಣವನ್ನು ನಿರ್ಮಿಸುವ ಮೂಲಕ ಗ್ರಾಮವನ್ನು ತಿರುಪತಿ ಮಾದರಿಯಲ್ಲಿ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡುವುದಾಗಿ ತಿಳಿಸಿದರು.
ಮಾಜಿ ಸಚಿವರಾದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಈ ಭಾಗದ ಭಕ್ತರೆಲ್ಲರ ಆಸೆಯಂತೆ ಕದರಮಂಡಲಗಿ ಗ್ರಾಮವನ್ನು ತಿರುಪತಿ ಮಾದರಿಯಲ್ಲಿ ಬಹುದೊಡ್ಡ ಯಾತ್ರಾ ಸ್ಥಳವನ್ನಾಗಿ ಮಾಡಲು ಜಿಲ್ಲೆಯ ಎಲ್ಲಾ ಶಾಸಕರು ಶ್ರಮಿಸುವುದಾಗಿ ತಿಳಿಸಿದರಲ್ಲದೇ, ಈ ದಿಶೆಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರ ಜೊತೆ ಎಲ್ಲರೂ ಚರ್ಚಿಸಿ ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದರು.
ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಹಾಗೂ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿರುವ ನಮ್ಮೆಲ್ಲರಿಗೂ ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದೀರಿ. ಈ ಭಾಗದ ಭಕ್ತರ ಆಶಯದಂತೆ ಗ್ರಾಮದ ದೇವಸ್ಥಾನವನ್ನು ಅಭಿವೃಧ್ದಿಗೊಳಿಸಿ ಯಾತ್ರಾ ಸ್ಥಳವನ್ನಾಗಿ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಐರಣಿ ಮಠದ ಶ್ರೀಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು ಸೇರಿದಂತೆ ಎಸ್.ಆರ್.ಪಾಟೀಲ, ಟಿ.ಈಶ್ವರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬೀರಪ್ಪ ಬಣಕಾರ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ಸುರೇಶ ಹುಳುಬುತ್ತಿ, ಡಿ.ಎಚ್.ಬುಡ್ಡನಗೌಡ್ರ, ರಮೇಶ ಸುತ್ತಕೋಟಿ, ಹನುಮಂತಪ್ಪ ನಾಯ್ಕರ, ಯಲ್ಲಪ್ಪ ಓಲೇಕಾರ, ಶ್ವೇತಾ ಹೂಲಿಹಳ್ಳಿ, ಕಾಂತೇಶ ಕರಲಿಂಗಪ್ಪನವರ, ಮಲ್ಲಪ್ಪ ಬಡಗಿರಿಯಣ್ಣನವರ, ಕನ್ನಪ್ಪ ಛತ್ರದ, ಶಿವಣ್ಣ ಅಂಬಲಿ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.