ತಿರುಪತಿ ತಿರುಮಲ ದೇವಸ್ಥಾನದಿಂದ ದಾಸನಮನ ಸ್ಪರ್ಧೆ


ದಾವಣಗೆರೆ. ಡಿ.೭; ತಿರುಪತಿ ತಿರುಮಲ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಜನವರಿಯ ಸಂಕ್ರಾಂತಿ ಹಬ್ಬದ ನಂತರ ದಾಸನಮನ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಜೆಕ್ಟ್ ನ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ಹೇಳಿದರು.
ನಗರದ ತ್ರಿಶೂಲ್ ಕಲಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಇಂದಿನ ಯುವಸಮೂಹಕ್ಕೆ ನಮ್ಮ ಸಂಸ್ಕೃತಿಯ ಅರಿವು ಕ್ಷೀಣವಾಗುತ್ತಿದೆ ಅವರಲ್ಲಿ ಧರ್ಮಜಾಗೃತಿ ಮತ್ತು ಭಕ್ತಿಯನ್ನು ಹೆಚ್ವಿಸುವ ಸಲುವಾಗಿ ಹರಿದಾಸರುಗಳ ರಚನೆಯ ಹಾಡುಗಳನ್ನು ಪ್ರಸಾರ ಮಾಡಬೇಕೆಂಬ ಮಹತ್ತರ ಉದ್ದೇಶದಿಂದ ದಾಸ ಸಾಹಿತ್ಯ ಪ್ರಾಜೆಕ್ಟ್ ಮುಖಾಂತರವಾಗಿ ದಾಸನಮನ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.15 ರಿಂದ 25 ವರ್ಷದ ಯುವಸಮೂಹಕ್ಕೆ ಅವಕಾಶ ಕಲ್ಪಿಸಲಾಗಿದೆ.ಪ್ರತಿಜಿಲ್ಲೆಯಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಿ ಒಳ್ಳೆಯ ಹಾಡುಗಾರರನ್ನು ಗುರುತಿಸಿ ರಾಜ್ಯಮಟ್ಟದವರೆಗೆ ಆರಿಸಿ ಅದರಲ್ಲಿ ಆಯ್ಕೆಯಾದವರು ಕೊನೆಯ ಹಂತದ ದಾಸನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಕೊನೆಯ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ ವರೆಗೆ ತಲುಪಿಸಿದವರಿಗೆ ತಿರುಪತಿ ತಿರುಮಲ ದೇವಸ್ಥಾನದ ವತಿಯಿಂದ ಶ್ರೀನಿವಾಸನ ಅನುಗ್ರಹದ ರೂಪವಾಗಿ ಪ್ರಮಾಣಪತ್ರ ಕೊಡಲಾಗುವುದು.ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಆನ್ ಲೈನ್ ವೆಬ್ ಸೈಟ್ www.svbcttd.com ಮುಖಾಂತರ ಅರ್ಜಿಗಳನ್ನು ಹಾಕಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ನಾಡಿನ ದಾಸಶ್ರೇಷ್ಠರು ರಚಿಸಿದ ಹಾಡುಗಳನ್ನೇ ಪ್ರಸ್ತುತ ಪಡಿಸಬೇಕು.ಸಂಗೀತದಲ್ಲಿ ಪ್ರಮಾಣಪತ್ರ ಇದ್ದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಪುರಾತನ ಹಾಡು,ಸುಳಾದಿಗಳು,ಉಗಾಭೋಗಗಳ ಹಸ್ತಪ್ರತಿಗಳು ಇದ್ದರೆ ಅವುಗಳನ್ನು ಸಂಶೋಧಿಸಿ ಸರಿಯಾದವುಗಳನ್ನು ಪರಿಗಣಿಸಿ ದೇವಸ್ಥಾನದ ವತಿಯಿಂದ ಮುದ್ರಣ ಮಾಡಲಾಗುವುದು ಎಂದರು.
ಆಧುನಿಕ ಯುಗದಲ್ಲಿ ಧರ್ಮದಿಂದ ದೂರಾದ ಯುವಕ ಯುವತಿಯರಲ್ಲಿ ಭಕ್ತಿಮೂಡಿಸುವ ಸಲುವಾಗಿ ಕನ್ನಡದಲ್ಲಿಯೂ ಕಳೆದ ಅಕ್ಟೋಬರ್‌ ನಿಂದ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಪ್ರಾಂಭಿಸಲಾಗಿದೆ ಈ ಮೂಲಕ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಟಿ ಸಿದ್ದಪ್ಪ ಇದ್ದರು.
Attachments areaReplyReply to allForward