ತಿರುಪತಿಯಲ್ಲಿ ಒಂದೇ ದಿನ 4.39 ಕೋಟಿ ರೂ. ಸಂಗ್ರಹ

ತಿರುಪತಿ,ಡಿ.೨೭-ಲಾಕ್ ಡೌನ್ ನಿಯಮ ತೆರವಿನ ನಂತರ ವೈಕುಂಠ ಏಕಾದಶಿಯ ಒಂದೇ ದಿನದಂದು ತಿರುಮಲ ದೇವಾಲಯದಲ್ಲಿ ೪.೩೯ ಕೋಟಿ ರೂ.ಸಂಗ್ರಹವಾಗಿದೆ.
ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ೪೨,೮೨೫ ಭಕ್ತರು ವೈಕುಂಠ ದ್ವಾರದ ದರ್ಶನ ಪಡೆದು ಪುನೀತರಾಗಿದ್ದಾರೆ.
ಲಾಕ್ ಡೌನ್ ನಿಬಂಧ ತೆರವಿನ ನಂತರ ಜೂ.೮ ರಂದು ದೇವಾಲಯ ಪುನರಾರಂಭ ಆದ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಹುಂಡಿಯಲ್ಲಿ ೪.೩೯ ಕೋಟಿ ರೂ.ಸಂಗ್ರಹವಾಗಿದೆ. ಕೆಲವು ಭಕ್ತರು ದೇವಾಲಯದ ಆಡಳಿತ ಮಂಡಳಿ ವಿರುದ್ಧ ದೂರು ಹೇಳಿಕೊಂಡಿದ್ದಾರೆ. ತಾವು ೧೦ ಸಾವಿರ ರೂಪಾಯಿ ದೇಣಿಗೆ ಹಾಗೂ ತಲಾ ೧ ಸಾವಿರ ರೂ. ಟಿಕೆಟ್ ಖರೀದಿಸಿ, ವಿಶೇಷ ದರ್ಶನಕ್ಕಾಗಿ ಕಾಯ್ದಿರಿಸಿದ್ದರೂ ೩೦೦ ರೂ.ಟಿಕೆಟ್ ಪಡೆದವರ ಜೊತೆಗೆ ತಾವು ಸಹ ದರ್ಶನ ಪಡೆಯಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಟಿಟಿಡಿ ಸಿಬ್ಬಂದಿಯೊಂದಿಗೆ ಈ ಬಗ್ಗೆ ವಾಗ್ವಾದ ಕೂಡ ಭಕ್ತರು ನಡೆಸಿದರಾದರೂ ವೈಕುಂಟ ದ್ವಾರ ದರ್ಶನದ ನೂನುನುಗ್ಗಲಿನಿಂದ ಸಮಸ್ಯೆ ಬಗ್ಗೆ ಹಾಗೂ ಟಿಟಿಡಿ ಸವಾಲುಗಳನ್ನು ಆನಂತರ ವಿವರಣೆ ನೀಡಿ ಹಿರಿಯ ಅಧಿಕಾರಿಗಳು ಭಕ್ತರನ್ನು ಸಮಾಧಾನ ಮಾಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಘಟನೆಯ ಬಗ್ಗೆ ಮಾತನಾಡಿದ್ದು, ಭಕ್ತರಲ್ಲಿ ತಿಳುವಳಿಕೆ ಕೊರತೆಯಿಂದ ಈ ಘಟನೆ ನಡೆದಿದೆ. ಶ್ರೀವಾಣಿ ಟ್ರಸ್ಟ್ ದಾನಿಗಳಿಗೂ ಮಹಾಲಘು ದರ್ಶನವೇ ಇತ್ತು. ಏಕೆಂದರೆ ಈ ಹತ್ತು ದಿನಗಳಲ್ಲಿ ಬಾರಿ ಸಂಖ್ಯೆಯಲ್ಲಿ ಭಕ್ತರಿರುತ್ತಾರೆ. ಹೆಚ್ಚಿನ ಸಂಖ್ಯೆಯ ಭಕ್ತರಿಗೆ ದರ್ಶನ ಕೊಡಿಸಬೇಕು ಎಂಬುದು ನಮ್ಮ ಉದ್ದೇಶ. ಮಹಾಲಘು ದರ್ಶನ ಮಾತ್ರ ದೊರೆಯುತ್ತದೆ ಎಂಬ ಸಂಗತಿ ಟಿಟಿಡಿಯಿಂದ ಶ್ರೀವಾಣಿ ಟ್ರಸ್ಟ್ ಟಿಕೆಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ.
ಇನ್ನು ಇದೇ ವಿಚಾರದ ಬಗ್ಗೆ ಐವರು ಭಕ್ತರ ಗುಂಪೊಂದು ಟಿಟಿಡಿ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಟಿಟಿಡಿಗೆ ಮುಜುಗರಕ್ಕೆಡೆ ಮಾಡಿದೆ.