ತಿರಂಗ ಅಭಿಯಾನಕ್ಕೆ ನೆಹರೂ ಭಾವಚಿತ್ರ ಹಾಕಿ ಕೈ ಗೇಲಿ

ನವದೆಹಲಿ,ಆ ೪-ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿಕೊಳ್ಳುವ ಮೂಲಕ ” ಹರ್ ಘರ್ ತಿರಂಗ” ಅಭಿಯಾನ ವಿರುದ್ದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಗೇಲಿ ಮಾಡಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ವಿರುದ್ದವಾಗಿ ಕಾಂಗ್ರೆಸ್ ನಾಯಕರು ನೆಹರು ಅವರು ರಾಷ್ಟ್ರ ದ್ವಜ ಹಿಡಿದಿರುವ ಭಾವಚಿತ್ರವನ್ನು ತಮ್ಮ ಸಾಮಾಜಿಕ ಖಾತೆಗಳಲ್ಲಿ ಹಾಕಿಕೊಂಡಿದ್ದಾರೆ.

ಪಕ್ಷದ ಮಾಧ್ಯಮ ಉಸ್ತುವಾರಿ ಹಾಗೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆರಂಭಿಸಿದ್ದಾರೆ.

ವಿಭಿನ್ನ ಧ್ವಜ ಬಳಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಾಗ್ದಾಳಿ ನಡೆಸಿರುವ ಜೈರಾಮ್ , ರಮೇಶ್, “ಸಂಘದವರು ಈಗ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳುತ್ತಿದ್ದಾರೆ, ನಾವು ನಮ್ಮ ನಾಯಕ ನೆಹರು ಅವರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿರುವುದನ್ನು ಹಾಕುತ್ತಿದ್ದೇವೆ ಎಂದಿದ್ದಾರೆ.

ಡಿಪಿ ಬದಲಿಸಿರುವ ಕಾಂಗ್ರೆಸ್ ನ ಮತ್ತೋರ್ವ ಹಿರಿಯ ನಾಯಕ ಪ್ರಮೋದ್ ತಿವಾರಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪೂರ್ವಜರು ಎಲ್ಲಿದ್ದರು, ಈಗ ತ್ರಿವರ್ಣ ಧ್ವಜ ಅಳವಡಿಸಿಕೊಳ್ಳುತ್ತಿರುವುದು’ ಸಂತಸ ತಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಟೀಕೆ ನೋವು ತರಿಸಿದೆ: ಪಿಎಂ

ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ೭೫ನೇ ಸ್ವಾತಂತ್ರ್ಯೋತ್ಸವದಂದು ದೇಶಾದ್ಯಂತ ಆಯೋಜಿಸಿರುವ ಆಚರಣೆಗಳಿಗೆ ಸಂಬಂಧಿಸಿದ ಕೆಲವು ರಾಜಕೀಯ ಟೀಕೆಗಳು ಹೃದಯಕ್ಕೆ ನೋವುಂಟುಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ನೀತಿ ರಾಜಕೀಯಕ್ಕಿಂತ ಮಿಗಿಲು. ಈ ತ್ರಿವರ್ಣ ಧ್ವಜ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ರಾಷ್ಟ್ರಕ್ಕೆ, ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದು ಕರೆ ನೀಡಿದ್ದಾರೆ.