ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ

ತಿರುಮಲ(ಆಂಧ್ರಪ್ರದೇಶ), ಜೂ.೨೩- ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಆಘಾತಕಾರಿ ಘಟನೆ ಅಲಿಪಿರಿ-ತಿರುಮಲ ಪಾದಚಾರಿ ಮಾರ್ಗದ ೭ನೇ ಮೈಲಿಯಲ್ಲಿ ನಡೆದಿದೆ.
ತಿರುಮಲ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕ ಕೌಶಿಕ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಿರುಪತಿಯ ಮಕ್ಕಳ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೌಶಿಕ್ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ವೆಂಕಟೇಶ್ವರನ ಕೃಪೆಯಿಂದ ಮಾತ್ರ ಬಾಲಕ ಚಿರತೆಯ ಹಿಡಿತದಿಂದ ಪಾರಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕನ ತನ್ನ ತಂದೆ-ತಾಯಿಯೊಂದಿಗೆ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ. ಈ ವೇಳೆ ಮಾರ್ಗ ಮಧ್ಯೆ ಚಿರತೆ ದಾಳಿ ನಡೆಸಿದೆ. ಬಾಲಕನ ಕಿವಿಯ ಹಿಂದೆ ತಲೆಯ ಇತರೆ ಭಾಗಗಳಿಗೆ ಗಾಯಗಳಾಗಿವೆ.
ಅಲಿಪಿರಿ ಮೆಟ್ಟಿಲುಗಳ ಮೇಲಿನ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಶ್ರೀವಾರಿ ಮೆಟ್ಟಿಲುಗಳಂತೆ ಸಂಜೆ ೬ ಗಂಟೆಯ ನಂತರ ಪಾದಯಾತ್ರೆಗೆ ಅನುಮತಿಯನ್ನು ಅಮಾನತುಗೊಳಿಸಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.. ಮೆಟ್ಟಿಲಸಾಲುಗಳಲ್ಲಿ ಪ್ರಾಣಿಗಳು ಓಡಾಡುವ ಜಾಗದಲ್ಲಿ ಬೇಲಿ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು. ಮಗುವಿನ ಆರೋಗ್ಯ ಸುಧಾರಿಸಿದ ನಂತರ ಸ್ವಾಮಿ ಕುಟುಂಬದವರಿಗೆ ದರ್ಶನ ನೀಡಲಿದ್ದಾರೆ.