ತಿಪ್ಪೆಗುಂಡಿ ಜಗಳ ಪ್ರಕರಣ ಇಬ್ಬರಿಗೆ 1 ವರ್ಷ ಜೈಲು ಶಿಕ್ಷೆ

ಕಲಬುರಗಿ ನ 24: ಮನೆಯ ಪಕ್ಕ ಹಾಕಿದ ತಿಪ್ಪೆಗುಂಡಿಯನ್ನು ಸ್ಥಳಾಂತರಿಸಿರಿ ಎಂದವನ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾದ್ದರಿಂದ ಇಬ್ಬರಿಗೆ 3 ನೆಯ ಅಪರ ಜೆಎಂಎಫ್ ಸಿ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ನೀಡಿದೆ.
ಕಲಬುರಗಿ ಹತ್ತಿರದ ಸಣ್ಣೂರ ಗ್ರಾಮದ ಸೋಮಶೇಖರ ಮಲ್ಕಜಪ್ಪ ಹಡಪದ ಮತ್ತು ರಾಜಶೇಖರ ಮಲ್ಕಜಪ್ಪ ಹಡಪದ ಎಂಬ ಇಬ್ಬರು ಶಿಕ್ಷೆಗೊಳಗಾಗಿದ್ದಾರೆ.
ಸುಮಾರು 7 ವರ್ಷಗಳ ಹಿಂದೆ ಅಂದರೆ 2014 ರ ಡಿಸೆಂಬರ್ 10 ರಂದು ಸಣ್ಣೂರ ಗ್ರಾಮದಲ್ಲಿ ಈ ಹಲ್ಲೆ ಪ್ರಕರಣ ನಡೆದಿತ್ತು.ಗ್ರಾಮದ ಮಲ್ಲಪ್ಪ ಸಾಬಣ್ಣ ಬೋಕಿ ಎಂಬುವವರು ತಮ್ಮ ಮನೆ ಪಕ್ಕದ ಹಾಕಿದ ತಿಪ್ಪೆಯನ್ನು ತೆಗೆಯಿರಿ ಎಂದು ಹಡಪದ ಕುಟುಂಬದವರಿಗೆ ಹೇಳಿದ್ದರು. ಜಾಗ ನಮ್ಮದಿದೆ ಎಂದು ಸೋಮಶೇಖರ ಮಲ್ಕಜಪ್ಪ ಹಡಪದ ಮತ್ತು ರಾಜಶೇಖರ ಮಲ್ಕಜಪ್ಪ ಹಡಪದ ಅವರು ಮಲ್ಲಪ್ಪನವರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 3 ನೇ ಅಪರ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ನೇಸರ್ಗಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಶಿವಶರಣಪ್ಪ ನಾಟೇಕರ್ ಅವರು ವಾದ ಮಂಡಿಸಿದ್ದರು.