ತಿಪ್ಪಲದಿನ್ನಿ ಗ್ರಾಮ: ೭೨ ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ

ಅರಕೇರಾ.ನ.೦೨- ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಮೇಲು-ಕೀಳು, ದ್ವೇಷಭಾವನೆ, ದೌರ್ಜನ್ಯ, ಕೊಲೆ, ಅತ್ಯಾಚಾರ ಸೇರಿದಂತೆ ಅನೇಕ ಸಮಸ್ಯೆಗಳಿಂದ ಭಾರತ ನರಳುತ್ತಿದೆ. ದೇಶದ ಜನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ ಬದುಕಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಜಾತಿ ವ್ಯವಸ್ಥೆಯ ಬೇರುಗಳನ್ನು ಕಿತ್ತೊಗೆಯಲು ಹಗಲಿರುಳು ಶ್ರಮಿಸಿದ್ದಾರೆ ಎಂದು, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ತಾಯರಾಜ್ ಮರ್ಚೆಟ್ಹಾಳ್ ಅವರು ಅಭಿಮತ ವ್ಯಕ್ತಪಡಿಸಿದರು.
ಅರಕೇರಾ ತಾಲೂಕಿನ ತಿಪ್ಪಲದಿನ್ನಿ ಗ್ರಾಮದ ಮಲ್ಲಮ್ಮ – ಭೀಮಪ್ಪ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಬುಧವಾರ ಆಯೋಜಿಸಿದ್ದ, ೭೨ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಂತರ ಮುಖ್ಯ-ಭಾಷಣಕಾರರಾಗಿ ನಾಗಡದಿನ್ನಿ ಮೆಟ್ರಿಕ್ ಪೂರ್ವ ಸರಕಾರಿ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಮಹಾಂತೇಶ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಜಾತಿ-ಧರ್ಮ, ರಾಜಕೀಯ ಶೋಷಣೆಗಳು ಹಾಗೂ ಬಡತನ ಜನರನ್ನು ನಿರಂತರವಾಗಿ ಕಾಡುತ್ತಿವೆ. ಇವುಗಳಿಂದ ಹೊರಬರಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಬಡತನಲ್ಲಿ ಹುಟ್ಟಿರಬಹುದು, ಆದರೆ ಬಡತನದಲ್ಲಿ ಸಾಯಬೇಡಿ ಎಂದು ನೀಡಿದ ಸಂದೇಶವನ್ನು ಪ್ರತಿಯೊಬ್ಬರು ಅರಿತು ಮೆಟ್ಟಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಹುಜನ ಸಂಘರ್ಷ ಸಮಿತಿ ಮಹಾ ಪೋಷಕರಾದ ಎಂ.ಆರ್.ಭೇರಿ ಹಾಗೂ ಸಂಘಟನೆಯ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಡದಿನ್ನಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭೀಮಪ್ಪ ತಿಪ್ಪಲದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಚಂದ್ರು ಮರೆಡ್ಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕೊನೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಕಾರ್ಯಕ್ರಮ ಆಯೋಜಿಸಿದ್ದ ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶರಣಪ್ರಕಾಶ ಪಟೀಲ್ ತಿಪ್ಪಲದಿನ್ನಿ, ಗೋವಿಂದರಾಜ್ ನಾಯಕ, ಗ್ರಾ.ಪಂ.ಸದಸ್ಯರಾದ ಬಾಷ ಸಾಬ್, ಮೋನಪ್ಪ, ಅಮರೇಶ, ಗಂಗಾಧರ ಮಡಿವಾಳ ಸೇರಿದಂತೆ ಕುಟುಂಬಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.