ತಿಪಟೂರು ಬಂದ್ ಶಾಂತಿಯುತ

ತಿಪಟೂರು, ಜು. ೩೦- ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಹಾಗೂ ಬಜರಂಗದಳ ಕರೆ ನೀಡಿದ್ದ ತಿಪಟೂರು ಬಂದ್ ಶಾಂತಿಯುತವಾಗಿ ನಡೆಯಿತು.
ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಬೆಂಬಲ ಸೂಚಿಸಿದವು. ಆಸ್ಪತ್ರೆ ಮೆಡಿಕಲ್ ಶಾಪ್ ಮಾತ್ರ ತೆರೆದಿದ್ದು, ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದವು. ಕೆಲ ಹೋಟೆಲ್‌ಗಳು ಸಹ ಮುಚ್ಚಿದ್ದವು. ಪೆಟ್ರೋಲ್ ಬಂಕ್ ಮುಚ್ಚಿ ಬೆಂಬಲ ಸೂಚಿಸಿದರು.
ಇಲ್ಲಿನ ಕೆಂಪಾಂಬ ದೇವಸ್ಥಾನದಿಂದ ಸುಮಾರು ೫೦೦ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಾದ ದೊಡ್ಡಪೇಟೆ ರೈಲ್ವೇ ಸ್ಟೇಷನ್ ರಸ್ತೆ ಮುಖಾಂತರ ಹಾಸನ್ ಸರ್ಕಲ್‌ವರೆಗೂ ಪಾದಯಾತ್ರೆ ಮಾಡಿ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಮಾತನಾಡಿದ ಬಜರಂಗದಳದ ಗೋ ಪ್ರಮುಖ ನಾಗೇಶ್, ವಿಕೃತ ಮನಸ್ಸಿನ ಜಿಹಾದಿಗಳು ಹಿಂದೂಪರ ಹೋರಾಟಗಾರ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೂಂಡು ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ಹತ್ಯೆಯನ್ನು ಮಾಡಿದ್ದಾರೆ. ಇವರಿಗೆ ಜೈಲಿನಲ್ಲಿ ರಾಜಾಆತಿಥ್ಯ ಸಿಗುತ್ತಿದ್ದು, ಯಾವುದೇ ಭಯಪಡದೆ ಕೊಲೆ ಮಾಡುತ್ತಿದ್ದಾರೆ. ಪೊಲೀಸರು ನಡುರಸ್ತೆಯಲ್ಲಿ ನಿಲ್ಲಿಸಿ ಶಿಕ್ಷೆ ನೀಡಬೇಕು ಎಂದರು.
ವಿಎಚ್‌ಪಿಯ ಮುಖಂಡ ಆಟೋ ಹರ್ಷ ಮಾತನಾಡಿ, ಪ್ರಪಂಚದಲ್ಲಿ ಹಿಂದೂ ದೇಶವಾದ ಭಾರತದಲ್ಲಿ ಭಾರತೀಯರು ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಾರೆ ಹೊರತು ಬೇರೆ ದೇಶಗಳಲ್ಲಿ ಹೋರಾಡುವುದಿಲ್ಲ. ಜಿಹಾದಿಗಳು ಪ್ರತಿ ತಾಲ್ಲೂಕಿನಲ್ಲಿಯೂ ಒಬ್ಬರನ್ನು ಹತ್ಯೆ ಮಾಡುತ್ತಿದ್ದಾರೆ. ಹಿಂದೂ ಸಮಾಜ ಯಾವುದೇ ಜಾತಿ ಮತ ನೋಡದೆ ಒಗ್ಗಟ್ಟಾಗಬೇಕಿದೆ. ಇಲ್ಲಿಯವರೆಗೆ ಹಿಂದುಗಳನ್ನು ಕೊಲೆ ಮಾಡಿದ ಪಾಪಿಗಳಿಗೆ ಸರಿಯಾದ ಸಾಕ್ಷಿ ಇಲ್ಲದೆ ಶಿಕ್ಷೆ ಆಗಿಲ್ಲ. ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ನೀಡಿದಾಗ ಮಾತ್ರ ವ್ಯವಸ್ಥೆ ಸರಿಯಾಗಲಿದೆ ಎಂದು ಹೇಳಿದರು.
ಬಾಳೆಕಾಯಿ ನಟರಾಜು ಅರಳುಗುಪ್ಪೆ ಯೋಗೀಶ್, ಹಾವೇನಹಳ್ಳಿ ಮಂಜು ಮೈಲಾರಿ ಸುಶೀಲ್ ಮುಂತಾದವರು ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಸೂಕ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು. ಎಎಸ್ಪಿ ಸಿದ್ದಾರ್ಥ ಗೋಯಲ್, ನಗರಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಶೈಲಮೂರ್ತಿ, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್, ನಗರಠಾಣೆ ಸಬ್ ಇನ್ಸ್‌ಪೆಕ್ಟರ್ ದ್ರಾಕ್ಷಾಯಿಣಿ ಬಂದೋಬಸ್ತ್ ಕಾರ್ಯದಲ್ಲಿ ಪಾಲ್ಗೊಂಡಿದ್ದರು.