ತಿಡಿಗೋಳ ನರೇಗಾ ಹಣ ದುರ್ಬಳಕೆ ಇಒ ಶ್ಯಾಮೀಲು : ದಿದ್ದಗಿ

ಸಿಂಧನೂರು.ಸೆ.೨೫: ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳು ಗುಣಮಟ್ಟದಿಂದ ಮಾಡದೆ ಕಳಪೆ ಕಾಮಗಾರಿ ಮಾಡಿ ಹಣದ ಭ್ರಷ್ಟಚಾರ ನಡೆಸಿದ್ದು ಇದರಲ್ಲಿ ತಾಪಂ ಇಒ ಶ್ಯಾಮೀಲಾಗಿದ್ದಾರೆ ಎಂದು ರೈತ ಸಂಘದ ರಾಜ್ಯ ಮುಖಂಡರಾದ ಅಮೀನ ಪಾಷ ದಿದ್ದಗಿ ಆರೋಪಿಸಿದರು.
ತಾಲೂಕಿನ ತಿಡಿಗೋಳ ಗ್ರಾಪಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಪಂ ವ್ಯಾಪ್ತಿಯಲ್ಲಿ ೭ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಗುಣಮಟ್ಟದ ಕಾಮಗಾರಿ ನಡೆಸದೆ, ಕಳಪೆಯಾಗಿದ್ದು ತನಿಖೆ ಮಾಡಿ ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ತಾಪಂ ಇಒಗೆ ದೂರು ನೀಡಿ ಎರಡು ತಿಂಗಳಾದರು ಸಹ ಯಾವುದೇ ಕ್ರಮ ಜರುಗಿಸಿಲ್ಲ.
ಗ್ರಾಮದ ಹನುಮನಗೌಡ ಹೊಲ, ಸಂಜೆ ಬಸವರಾಜ ಹೊಲ, ಉಪ್ಪಲದೊಡ್ಡಿ ಹೊಲದಿಂದ ರಾಮನಗೌಡ ಹೊಲ, ತಿಡಿಗೋಳ ಔಟ್‌ಲೇಟ್ ಪೊಲೀಸ್ ಗೌಡರ ಹೊಲ, ತಿಡಿಗೋಳ ಹನುಮೇಶ ಗದ್ದೆ ಹೊಲದಿಂದ ಈ ಸದ್ರಿ ರೈತರ ಹೊಲಗಳಲ್ಲಿ ಕಾಲುವೆ(ನಾಲಾ) ಹೂಳೆತ್ತುವುದು ಮತ್ತು ಅಭಿವೃದ್ಧಿ ಕಾಮಗಾರಿ ಈ ಏಳು ಕಾಮಗಾರಿಗಳಿಗೆ ಅಂದಾಜು ೫೦ಲಕ್ಷ ರೂ ನಿಗಧಿಪಡಿಸಲಾಗಿದ್ದು ಗ್ರಾಪಂ ಪಿಡಿಒ ಚನ್ನಬಸವ, ಕಂಪ್ಯೂಟರ್ ಆಪರೇಟರ್ ಉಮೇಶ, ಜೆಇ ಅರುಣಕುಮಾರ ಗುಣಮಟ್ಟದ ಕಾಮಗಾರಿ ನಡೆಸದೆ ಕಳಪೆ ಮಾಡಿದ್ದು ಹಾಗೂ ಕೆಲವೊಂದು ಕಾಮಗಾರಿಗಳನ್ನು ಮಾಡದೆ ನಕಲಿ ಬಿಲ್ ಸೃಷ್ಠಿಸಿ ಹಣ ತಿಂದು ಹಾಕಿದ್ದಾರೆ.
ಏಳು ಕಾಮಗಾರಿಗಳ ಹೆಸರಿನಲ್ಲಿ ಹಣ ದುರಪಯೋಗ ಮತ್ತು ನಕಲಿ ಬಿಲ್ ಮಾಡಿಕೊಂಡು ಹಣ ತಿಂದು ಹಾಕಿರುವುದು ತನಿಖೆ ನಡೆಸಿ, ತಪ್ಪಿಸ್ಥತ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲು ಆಗ್ರಹಸಿ ರೈತ ಸಂಘದ ಶಿವನಪ್ಪ ಅಮರಪ್ಪ ಮತ್ತು ಬಸವರಾಜ ಹನುಮಂತಪ್ಪ ಇವರು ತಾಪಂ ಇಒಗೆ ದೂರು ನೀಡಿದರು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದು ಪುನ ಅಧಿಕಾರಿಗಳನ್ನು ಬೇಟಿ ಮಾಡಿ ಒತ್ತಾಯಿಸಿದಾಗ ಗ್ರಾಪಂಗೆ ಹೋಗಿ ತನಿಖೆ ಮಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ನಂದಿ ಬೇವೂರಗೆ ತಾಪಂ ಸೂಚನೆ ನೀಡಿದ್ದು ೨ತಿಂಗಳು ತಡವಾಗಿ ನಂದಿ ಬೇವೂರು ಗ್ರಾಪಂಗೆ ತನಿಖೆ ನಡೆಸುವ ನಾಟಕವಾಡುವ ನೋಡಿದರೆ ಭ್ರಷ್ಟಚಾರದ ಹಣ ದುರುಪಯೋಗದ ಬಗ್ಗೆ ತನಿಖೆ ಮಾಡದೆ ಅಧಿಕಾರಿಗಳ ಪರವಾಗಿ ವರದಿ ನೀಡುವ ಅನುಮಾನ ಬರುತ್ತಿದೆ. ಅಧಿಕಾರಿಗಳ ಭ್ರಷ್ಟಚಾರದ ಕುರಿತು ತನಿಖೆ ನಡೆಸದೆ ವಿಳಂಬ ಮಾಡಿದ್ದು ನೋಡಿದರೆ ಭ್ರಷ್ಟಚಾರದಲ್ಲಿ ಸಿಂಧನೂರು ತಾಪಂ ಇಒ ಪವನ್‌ಕುಮಾರ ಶ್ಯಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಮೀನ ಪಾಷ ದಿದ್ದಗಿ ಆರೋಪಿಸಿದರು.