ತಿಂಗಳ ಬಳಿಕ ಅಮೃತ್‌ಪಾಲ್ ಸೆರೆ

ಚಂಡಿಗಡ,ಏ.೨೩-ತೀವ್ರಗಾಮಿ ಸಿಖ್ ಧರ್ಮ ಪ್ರಚಾರಕ “ವಾರಿಸ್ ಪಂಜಾಬ್ ದೇ” ಸಂಘಟನೆ ಮುಖ್ಯಸ್ಥ ಅಮೃತಪಾಲ್ ಸಿಂಗ್ ಒಂದು ತಿಂಗಳ ನಂತರ ಪಂಜಾಬ್ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೋಗಾದಲ್ಲಿ ಬಂದಿಸಿ ಅಸ್ಸಾಂನ ದಿಬ್ರುಘಡ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಈಗಾಗಲೇ ಈತನ ಹಲವು ಸಹಚರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಅಮೃತಪಾಲ್ ಸಿಂಗ್ ಖಲಿಸ್ತಾನಿ-ಪಾಕಿಸ್ತಾನ ಏಜೆಂಟ್ ಎನ್ನಲಾಗಿದೆ. ಕಳೆದ ತಿಂಗಳು ಮಾರ್ಚ್ ೧೮ ರಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜಲಂಧರ್ ಜಿಲ್ಲೆಯಲ್ಲಿ ವಾಹನಗಳನ್ನು ಬದಲಾಯಿಸುವ ಮೂಲಕ ಪೊಲೀಸ್ ರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಫೆಬ್ರವರಿಯಲ್ಲಿ ತನ್ನ ಸಹಾಯಕನ ಬಂಧನದ ವಿರುದ್ಧ ಅಮೃತಪಾಲ್ ಸಿಂಗ್ ಭಾರೀ ಪ್ರತಿಭಟನೆಯ ನಡೆಸಿದ್ದರು. ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಅನುಯಾಯಿ ಎಂದು ಹೇಳಿಕೊಳ್ಳುವ ಆತ ಆತನ ಮಾದರಿಯಲ್ಲಿ ಹೋರಾಟ ಮಾಡುತ್ತ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದೆ.

ಅಮೃತಪಾಲ್ ಸಿಂಗ್ ಅವರು ಆತ್ಮಹತ್ಯಾ ದಾಳಿ ನಡೆಸಲು ಯುವಕರನ್ನು ಸಜ್ಜುಗೊಳಿಸುತ್ತಿದ್ದಾರೆ ಅಲ್ಲದೆ ರಾಜ್ಯಾದ್ಯಂತ ಮೆರವಣಿಗೆ ನಡೆಸಲು ಯೋಜಿಸುತ್ತಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ತೀವ್ರಗಾಮಿ ಬೋಧಕ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಮೂಲಕ ಪಾಕಿಸ್ತಾನದಿಂದ ಅಕ್ರಮವಾಗಿ ಪಡೆದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ವ್ಯಸನ ಕೇಂದ್ರಗಳನ್ನು ಬಳಸುತ್ತಿದ್ದನು ಎನ್ನಲಾಗಿದೆ

ಅಮೃತಪಾಲ್ ಸಿಂಗ್ ಅವರು ಯುವಕರನ್ನು “ಬಂದೂಕು ಸಂಸ್ಕೃತಿ” ಯತ್ತ ಕೊಂಡೊಯ್ಯುತ್ತಿದ್ದಾರೆ ಮತ್ತು ಪಂಜಾಬ್ ಅನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಚ್ ೨ ರಂದು ನಡೆದ ಸಭೆಯಲ್ಲಿ ಅಮೃತಪಾಲ್ ಸಿಂಗ್ ಅವರನ್ನು ಬಂಧಿಸುವ ಯೋಜನೆಯನ್ನು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.