ತಿಂಗಳೊಳಗೆ 2 ಸಾವಿರ ವೈದ್ಯರ ನೇರನೇಮಕಾತಿ: ಡಾ.ಸುಧಾಕರ್

ಬಳ್ಳಾರಿ ಮಾ 31 : ಎರೆಡು ಸಾವಿರಕ್ಕೂ ಹೆಚ್ಚು ವೈದ್ಯರನ್ನು, 700ಕ್ಕೂ ಹೆಚ್ಚು ಪ್ಯಾರಾಮೆಡಿಕಲ್,ನರ್ಸಿಂಗ್ ಸಿಬ್ಬಂದಿಗಳನ್ನು ಬರುವ ಒಂದು ತಿಂಗಳೊಳಗೆ ನೇರನೇಮಕಾತಿ ಮಾಡಲಿದೆಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಅವರು ನಿನ್ನೆ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವರ್ಚುವಲ್ ತಂತ್ರಜ್ಞಾನದ ಮೂಲಕ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಳಿತು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಉತ್ತೇಜನ ನೀಡಲು ಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು,ನಿರ್ಧಿಷ್ಠ ಕಾನೂನುಗಳನ್ನು ಬದಲಾವಣೆ ಮಾಡುತ್ತಿದ್ದೇವೆ ಎಂದು ವಿವರಿಸಿದ ಅವರು ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಆರೋಗ್ಯಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಸ್‍ಆರ್ ಸಮಿತಿ ರಚಿಸಲಾಗಿದ್ದು,ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ.
ಆಂದ್ರಪ್ರದೇಶ ಮತ್ತು ರಾಜ್ಯದ ಜನತೆಗೆ ಚಿಕಿತ್ಸೆ ನೀಡುವ ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 150ರಿಂದ 250ಕ್ಕೆ ಹೆಚ್ಚಿಸಿ ಉನ್ನತೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು,ಈ ಪ್ರಸ್ತಾವನೆಗೆ ಸರಕಾರ ಸ್ಪಂದಿಸಿ ವಿಮ್ಸ್ ಸಂಸ್ಥೆಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಬದ್ಧವಾಗಿದೆಂದರು.
ಲಸಿಕೆ ಹಾಕಿಸಿ:
ಆತ್ಮನಿರ್ಭರ್ ಭಾರತದಡಿ ಒಂದು ವರ್ಷದೊಳಗೆ ಲಸಿಕೆ ತಂದೆ ತರುತ್ತೇವೆ ಅಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದರು;10 ತಿಂಗಳೊಳಗೆ ಲಸಿಕೆಯನ್ನು ತಂದಿದ್ದಾರೆ. ಈ ಲಸಿಕೆ ತೆಗೆದುಕೊಳ್ಳುವುದಕ್ಕೆ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟವರು ಲಸಿಕಾ ಕೇಂದ್ರಕ್ಕೆ ಬರಬೇಕು ಎಂದು ಸಚಿವ ಡಾ.ಸುಧಾಕರ್ ಮನವಿ ಮಾಡಿದರು.ರಾಜ್ಯದಲ್ಲಿ ಪ್ರತಿದಿನ 3ಲಕ್ಷ ಲಸಿಕೆ ನೀಡುವುದಕ್ಕೆ ಸಾಮಥ್ರ್ಯ ಇದೆ. ಯುವಜನರು ತಮ್ಮ ಮನೆಯಲ್ಲಿರುವ ಹಿರಿಯರನ್ನು ಲಸಿಕಾಕೇಂದ್ರಕ್ಕೆ ಕರೆತರುವ ಕೆಲಸ ಮಾಡಬೇಕು ಎಂದರು.
ಈಗಾಗಲೇ ಕೋವಿಡ್ 2ನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆ ಬಳ್ಳಾರಿ ಗಡಿಜಿಲ್ಲೆಯಾಗಿರುವುದರಿಂದ ಜಿಲ್ಲಾಡಳಿತ ಹೆಚ್ಚಿನ ಜಾಗೃತಿ ವಹಿಸಬೇಕು.ಜನತಾ ಕಫ್ರ್ಯೂ ಅನ್ನು ಸ್ವತಃ ನಾವೇ ವಿಧಿಸಿಕೊಳ್ಳುವುದರಿಂದ ಮಾತ್ರ 2ನೇ ಅಲೆ ತಡೆಯಲಿಕ್ಕೆ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಮೂಲಭೂತ ಸೌಕರ್ಯ,ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸಮಾರಂಭದಲ್ಲಿ ಮಾತನಾಡಿ, ವಿಮ್ಸ್ ನಲ್ಲಿ ಅಪರೇಶನ್ ಥಿಯಟೇರ್ಗೆ ಅವಶ್ಯಕತೆ ಇರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕ್ಯಾಬಿನೆಟ್‍ನಲ್ಲಿ ಅನುಮೋದನೆ ದೊರಕಿದೆ;ಇದಕ್ಕೆ ವಿಶೇಷ ಜವಾಬ್ದಾರಿ ವಹಿಸಿ ಮಾಡುವಂತೆ ಅವರು ಸಚಿವ ಡಾ.ಸುಧಾಕರ್ ಅವರಲ್ಲಿ ಕೇಳಿಕೊಂಡರು.