ತಿಂಗಳಿಗೆ ೭೦ ಮಕ್ಕಳ ಗರ್ಭಪಾತ: ನರ್ಸ್ ಸ್ಫೋಟಕ ಹೇಳಿಕೆ

ಬೆಂಗಳೂರು,ಡಿ.೨-ತಿಂಗಳಿಗೆ ೭೦ ಮಕ್ಕಳ ಗರ್ಭಪಾತ ಮಾಡುತ್ತಿದ್ದು, ತಿಂಗಳಲ್ಲಿ ಕನಿಷ್ಠ ೨ ಪ್ರಕರಣದಲ್ಲಿ ೬ ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ ಎನ್ನುವ ಭಯಾನಕ ಕೃತ್ಯವನ್ನು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಬಂಧಿತ ಮತ್ತೊಬ್ಬ ಆರೋಪಿ ನರ್ಸ್ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ.
ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ ಬಂಧಿತ ಆರೋಪಿಯಾಗಿದ್ದು, ವಿಚಾರಣೆಯಲ್ಲಿ ಆಕೆ ತಿಂಗಳಲ್ಲಿ ಕನಿಷ್ಠ ೨ ಪ್ರಕರಣದಲ್ಲಿ ೬ ತಿಂಗಳ ಮಕ್ಕಳನ್ನು ಹೊರತೆಗೆಯುತ್ತಿದ್ದು,ಆ ಮಕ್ಕಳಿಗೆ ಜೀವ ಇರುತ್ತಿತ್ತು ಎನ್ನುವ ಆತಂಕಕಾರಿ ಸಂಗತಿಯನ್ನು ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಆಗಿದ್ದ ಮಂಜುಳಾ ಭ್ರೂಣ ಹತ್ಯೆಯ ಕುರಿತು ಸ್ಫೋಟಕ ಮಾಹಿತಿಗಳನ್ನು ಇಂಚಿಚಾಗಿ ಬಿಚ್ಚಿಟ್ಟಿದ್ದು, ೬ ತಿಂಗಳ ಮಗುವಿಗೆ ಧ್ವನಿ ಇರುವುದಿಲ್ಲ. ಮಗು ಹೊರಗೆ ತೆಗೆದ ೫ರಿಂದ ೧೦ ನಿಮಿಷದಲ್ಲಿ ಸಾಯುತ್ತಿದ್ದವು. ಅದನ್ನು ಪೇಪರ್‌ನಲ್ಲಿ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದೆ. ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಬಿಸಾಕಿ ಬರುತ್ತಿದ್ದ.
೧೨ ವಾರ ಕಳೆದ ಮಕ್ಕಳನ್ನು ಅಬಾರ್ಟ್ ಮಾಡಿ ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು. ೪ ದಿನಕ್ಕೆ ಮೆಡಿಕಲ್ ವೇಸ್ಟ್ ಅಲ್ಲಿ ಮಗು ಕೊಳೆತು ಹೋಗುತ್ತಿತ್ತು ಎಂಬ ಭಯಾನಕ ವಿಚಾರ ಪೊಲೀಸರ ಮುಂದೆ ತೆರೆದಿಟ್ಟಿದ್ದಾಳೆ.
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಮಂಜುಳಾ, ಕಳೆದೊಂದು ವರ್ಷದಿಂದ ನಾನು ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ೭೦ ಮಕ್ಕಳನ್ನು ಗರ್ಭಪಾತ ಮಾಡಿದ್ದೇನೆ. ಈ ಮೊದಲು ರೀಸ್ಮಾ ಗರ್ಭಪಾತ ಮಾಡುವ ಕೆಲಸವನ್ನು ಮಾಡುತ್ತಿದ್ದಳು. ಅವಳಾದ ಬಳಿಕ ನಾನು ಮಗುವನ್ನು ಗರ್ಭಪಾತ ಮಾಡುವುದಕ್ಕೆ ಸೇರಿಕೊಂಡಿದ್ದೆ. ೬ ತಿಂಗಳ ಮಗುವನ್ನು ನಾನು ಗರ್ಭಪಾತ ಮಾಡಿದ್ದೇನೆ ಎಂದಿದ್ದಾಳೆ.
ನಿಸಾರ್ ಮಗುವನ್ನು ನದಿಗೆ ಎಸೆದು ಬರುತ್ತಿದ್ದು ಯಾವ ಜಾಗದಲ್ಲಿ ಆ ಮಗುವನ್ನು ಬಿಸಾಕುತ್ತಿದ್ದ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನದಿಯನ್ನು ಬಿಟ್ಟು ಬೇರೆ ಜಾಗದಲ್ಲಿ ಬಿಸಾಕಿದರೆ ಅವಷೇಶಗಳು ಸಿಕ್ಕಿಬಿಡುತ್ತದೆ. ಅದಕ್ಕೆ ನಿಸಾರ್ ಮಗುವನ್ನು ಬಿಸಾಕುವ ಕೆಲಸ ಮಾಡುತ್ತಿದ್ದು ಭ್ರೂಣ ಹತ್ಯೆ ಮಾಡಿದ ಬಳಿಕ ತೀರಾ ರಕ್ತಸ್ರಾವ ಆಗುತ್ತಿತ್ತು.
ಆಗ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆರು ತಿಂಗಳ ಮಗುವನ್ನು ಗರ್ಭಪಾತ ಮಾಡುವುದಕ್ಕೆ ಬೇರೆಯೇ ಕಾರಣ ಇತ್ತು. ನಮ್ಮ ಬಳಿ ಅಡ್ವಾನ್ಸ್ ಸ್ಕ್ಯಾನಿಂಗ್ ಯಂತ್ರ ಇರಲಿಲ್ಲ. ಕೆಲವೊಮ್ಮೆ ಹೆಣ್ಣು ಭ್ರೂಣನಾ? ಗಂಡು ಭ್ರೂಣ ಎಂದು ಗೊತ್ತಾಗುತ್ತಿರಲಿಲ್ಲ. ಲಿಂಗ ಪತ್ತೆಯಾಗದೇ ಇದ್ದಾಗ ತಿಂಗಳು ಬಿಟ್ಟು ಬರುವುದಕ್ಕೆ ಹೇಳುತ್ತಿದ್ದೆವು. ಹೀಗಾಗಿ ಮಗುವನ್ನು ಕಂಡು ಹಿಡಿಯಲು ತಡ ಆದಾಗ ೬ ತಿಂಗಳ ಮಗುವನ್ನು ಗರ್ಭಪಾತ ಮಾಡಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾಳೆ.
೬ ತಿಂಗಳ ಮಗು ಗರ್ಭಪಾತ ಮಾಡಲು ನಮ್ಮದೇ ಕಾರಣ ಇದೆ. ೬ ತಿಂಗಳ ಮಗುವನ್ನು ಸಿಸೇರಿಯನ್ ಮೂಲಕ ಹೆರಿಗೆ ರೀತಿಯಲ್ಲಿ ಮಾಡುತ್ತಿದ್ದೆವು. ಸಿ ಸೆಕ್ಷನ್ ಮೂಲಕ ತೆಗೆದು ಟೇಬಲ್ ಮೇಲೆ ಇಡಲಾಗುತ್ತಿತ್ತು. ೫ ರಿಂದ ೧೦ ನಿಮಿಷಕ್ಕೆ ಆ ಮಗು ಸಾಯುತ್ತಿತ್ತು. ತಾಯಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಸಿ ಸೆಕ್ಷನ್ ಮಾಡಲಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರಿಗೆ ನೀಡಿದ್ದಾಳೆ.
ವೈದ್ಯ ಚಂದನ್ ಬಲ್ಲಾಳ್ ಪುರಾಣವನ್ನು ಪೊಲೀಸರು ಬಿಚ್ಚಿಟ್ಟಿದ್ದು, ಅಸಲಿಗೆ ಚಂದನ್ ಬಲ್ಲಾಳ್ ಎಂಬಿಬಿಎಸ್ ಪೂರ್ಣಗೊಳಿಸಿರುವ ವೈದ್ಯರೇ ಅಲ್ಲ. ಅವನು ಸ್ಕ್ಯಾನಿಂಗ್ ಮಾಡುವ ಪಾಠವನ್ನೇ ಕಲಿತಿರಲಿಲ್ಲ. ಚಂದನ್ ಬಲ್ಲಾಳ್. ಈತ ಕೇವಲ ಆಯುರ್ವೇದದ ಚಿಕಿತ್ಸೆಯನ್ನು ಮಾತ್ರ ಕೊಡಬೇಕಿತ್ತು. ನರ್ಸಿಂಗ್ ಹೋಂ ತೆಗೆಯಲು ಈತನಿಗೆ ವಿದ್ಯಾರ್ಹತೆ ಇಲ್ಲ. ಆದರೂ ನರ್ಸಿಂಗ್ ಹೋಂ ತೆಗೆದಿದ್ದ ಎಂದು ಹೇಳಿದ್ದಾಳೆ.