ತಿಂಗಳಾದರೂ ವೇತನವಿಲ್ಲ – ರವಿ ಬೋಸರಾಜು ನೆರವು

ಓಪೆಕ್ : ಕೊರೊನಾ ಸೋಂಕಿತರ ಸೇವಾ ವಾರಿಯರ್ಸ್
ರಾಯಚೂರು.ಮೇ.೧೬- ಮಾಸಿಕ ವೇತನಕ್ಕಾಗಿ ಕೊರೊನಾ ಮಹಾಮಾರಿಯಂತಹ ಮಾರಣಾಂತಿಕ ಈ ಸೋಂಕಿನ ಮಧ್ಯೆಯೂ ಕಾರ್ಯ ನಿರ್ವಹಿಸುವ ಓಪೆಕ್ ಆಸ್ಪತ್ರೆಯ ೧೬ ಸಿಬ್ಬಂದಿಗಳಿಗೆ ೪೫ ದಿನ ಕಳೆದರೂ ವೇತನ ದೊರೆಯದಿರುವುದನ್ನು ಮನಗಂಡ ಯುವ ಕಾಂಗ್ರೆಸ್ ರವಿ ಬೋಸರಾಜು ನಿನ್ನೆ ತಲಾ ಒಬ್ಬರಿಗೆ ೩ ಸಾವಿರ ನೆರವು ನೀಡಿ, ಕೊರೊನಾ ಮಹಾಮಾರಿಯ ಚಿಕಿತ್ಸೆಯಲ್ಲಿ ತಮ್ಮನ್ನು ತಾವು ಮುಂದುವರೆಸುವಂತೆ ಪ್ರೇರೆಪಿಸಿದ ಘಟನೆ ನಡೆಯಿತು.
ಕಳೆದ ಒಂದು ವಾರದಿಂದ ನಿರಂತರವಾಗಿ ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳಿಗೆ ತೆರಳುತ್ತಿದ್ದ ರವಿ ಬೋಸರಾಜು ಅವರು ಅಲ್ಲಿಯ ಸಿಬ್ಬಂದಿಯ ಪರಿಸ್ಥಿತಿ ಅರಿತು ತಕ್ಷಣವೇ ಸ್ಪಂದಿಸುವ ಮೂಲಕ ನಿನ್ನೆ ತಲಾ ಒಬ್ಬರಿಗೆ ೩ ಸಾವಿರ ನೀಡಿ, ತಾತ್ಕಾಲಿಕವಾಗಿ ಅವರ ನೆರವಿಗೆ ಬಂದರು. ಮಾರ್ಚ್ ತಿಂಗಳಿನಿಂದ ಕೊರೊನಾ ಸೋಂಕಿತರ ಜೀವ ರಕ್ಷಣೆಯ ಸಂಘರ್ಷದಲ್ಲಿ ತೊಡಗಿದ್ದ ಈ ಸಿಬ್ಬಂದಿಗೆ ಏಪ್ರೀಲ್ ತಿಂಗಳ ವೇತನ ಇನ್ನೂವರೆಗೂ ನೀಡಿಲ್ಲ. ಕನಿಷ್ಟ ವೇತನ ಆಧಾರದಲ್ಲಿ ಈ ಸಿಬ್ಬಂದಿಯೂ ಕಾರ್ಯ ನಿರ್ವಹಿಸುತ್ತಿದೆ.
ವೈದ್ಯರೊಂದಿಗೆ ಅತ್ಯಂತ ಪ್ರಮುಖವಾಗಿ ಕಾರ್ಯ ನಿರ್ವಹಿಸುವ ಈ ಸಿಬ್ಬಂದಿಯಿಂದ ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಯಲ್ಲಿ ಅನೇಕ ಸೋಂಕಿತರ ಜೀವ ಉಳಿಸಲಾಗಿದೆ. ಆದರೆ, ಇಂತಹ ಮಹತ್ತರ ಸೇವೆಯಲ್ಲಿ ತೊಡಗಿದ ೧೬ ಜನ ಸಿಬ್ಬಂದಿಗೆ ಇನ್ನೂವರೆಗೂ ವೇತನ ಬಾರದೇ, ಅವರ ಕುಟುಂಬಗಳು ಸಾಲಸೂಲ ಮಾಡಿ, ಜೀವನ ನಡೆಸಬೇಕಾಗಿದೆ. ಕನಿಷ್ಟ ೧೦ ಸಾವಿರ ವೇತನದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳ ವೇತನ ನೀಡದೇ, ಜಿಲ್ಲಾಡಳಿತ ಮತ್ತು ರಿಮ್ಸ್ ಆಸ್ಪತ್ರೆಯ ಡೀನ್ ಅವರ ಹಕ್ಕುಗೆ ಚ್ಯುತಿ ಉಂಟು ಮಾಡಿದ್ದಾರೆ.
ದಿನದ ೧೨ ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಾದ ಈ ಸಿಬ್ಬಂದಿಗೆ ಒಂದೆಡೆ, ಕೊರೊನಾ ಸೋಂಕಿತರ ಸೇವೆಯ ಒತ್ತಡ ಮತ್ತೊಂದೆಡೆ ಕುಟುಂಬ ನಿರ್ವಹಣೆಯ ಖರ್ಚುವೆಚ್ಚ ನಿರ್ವಹಿಸುವ ಒತ್ತಡ ಇಂತಹ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ ವೇತನ ದೊರೆಯುವಂತೆ ಮಾಡುವ ಕನಿಷ್ಟ ಜವಾಬ್ದಾರಿಯನ್ನು ಜಿಲ್ಲಾಡಳಿತವಾಗಲಿ, ರಿಮ್ಸ್ ಆಸ್ಪತ್ರೆಯ ಮುಖ್ಯಸ್ಥರಾಗಲಿ ಅಥವಾ ಇಲ್ಲಿಯ ಜನಪ್ರತಿನಿಧಿಗಳಾಗಲಿ ಕೈಗೊಳ್ಳದಿರುವುದು ದುರದೃಷ್ಟಕರ. ಆದರೆ, ನಿತ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ರವಿ ಬೋಸರಾಜು ಅವರು ಇವರ ಸ್ಥಿತಿ ಮನಗಂಡು ಅವರಿಗೆ ತಲಾ ೩ ಸಾವಿರದಂತೆ ನೆರವು ನೀಡಿ, ಅವರ ಸೇವಾಕಾರ್ಯಕ್ಕೆ ಪ್ರೇರಣೆಯಾಗಿದ್ದಾರೆ. ಇನ್ನಾದರೂ ಜಿಲ್ಲಾಡಳಿತ, ರಿಮ್ಸ್ ಆಸ್ಪತ್ರೆಯ ಡೀನ್ ಮತ್ತು ಜನಪ್ರತಿನಿಧಿಗಳು ಇವರಿಗೆ ವೇತನ ದೊರೆಯುವಂತೆ ವ್ಯವಸ್ಥೆ ಮಾಡುವರೇ?.