
ನಿಯತ್ತಿನಲ್ಲಿ ನಾಯಿಗೆ ಸಮವಾದ ಪ್ರಾಣಿ ಇಲ್ಲ ಎನ್ನುತ್ತಾರೆ. ಸಾಕಿದ ಯಜಮಾನನ ಮೇಲೆ ಆ ಪ್ರಾಣಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಪುಟ್ಟ ಮಕ್ಕಳಿಗಂತೂ ನಾಯಿ ಅಂದರೆ ಪ್ರಾಣ.
ಇಂತಹ ಕಥೆ ಮುಂದಿಟ್ಟುಕೊಂಡು ಅಂಗವೈಕಲ್ಯವಿರುವ ಬಾಲಕಿ ಹಾಗೂ ನಾಯಿ ನಡುವಿನ ಮಧುರ ಬಾಂಧವ್ಯದ ಸುತ್ತ ಹೆಣೆಯಲಾದ “ಪ್ರೊಡಕ್ಷನ್ಸ್ ನಂ 2” ಹೆಸರಿನಲ್ಲಿ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ.
ಮಾಧವ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ ನಾಯಕಿ. ಶರಣಪ್ಪ ಗೌರಮ್ಮ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಾಹಿತಿ ಗೌಸ್ ಫಿರ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರವನ್ನು ಕೂಡ ಶರಣಪ್ಪ ಗೌರಮ್ಮ ಅವರು ಪಾಲುದಾರಿಕೆಯಲ್ಲಿ ನಿರ್ಮಿಸುತ್ತಿದ್ದಾರೆ.
ನಿರ್ಮಾಪಕ ಶರಣಪ್ಪ ಪುತ್ರಿ ಬೇಬಿ ಪ್ರಕೃತಿ ಚಿತ್ರದ ಪ್ರಮುಖ ಪಾತ್ರಧಾರಿ. ಅಂಗವೈಕಲ್ಯವಿರುವ ಹುಡುಗಿಯಾಗಿ ಪ್ರಕೃತಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಮುಖ್ಯಪಾತ್ರದಲ್ಲಿ ರಾಕಿ(ನಾಯಿ) ಕೂಡ ಅಭಿನಯಿಸಲಿದೆ.
ಮೂರು ಹಾಡುಗಳಿರುವ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡುತ್ತಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸದ್ಯದಲ್ಲೇ ಶೀರ್ಷಿಕೆ ಅನಾವರಣವಾಗಲಿದೆ. ಶಿವಮೊಗ್ಗ ಹಾಗೂ ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ.