ತಿಂಗಳಾಂತ್ಯಕ್ಕೆ ದೆಹಲಿಯಲ್ಲಿ ಕ್ವಾಡ್ ಸಭೆ

ದೆಹಲಿ, ಫೆ.೮- ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಅನುಪಸ್ಥಿತಿಯಲ್ಲಿ ಜನವರಿಯಲ್ಲಿ ನಡೆಯಲಿದ್ದ ಕ್ವಾಡ್ ಶೃಂಗಸಭೆ ಆಯೋಜನೆಗೊಳ್ಳದ ನಡುವೆ ಇದೀಗ ಫೆಬ್ರವರಿ ೨೧ರಿಂದ ೨೩ರ ನಡುವೆ ದೆಹಲಿಯಲ್ಲಿ ನಡೆಯಲಿರುವ ರೈಸಿನಾ ಸಂವಾದದ ನೇಪಥ್ಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ರ ಮಟ್ಟದ ಕ್ವಾಡ್ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಜನವರಿ ೨೬ರ ಪ್ರಜಾಪ್ರಭುತ್ವ ಸಮಾರಂಭದಲ್ಲಿ ಭಾರತವು ಜೋ ಬೈಡೆನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನ ನೀಡಿತ್ತು. ಆದರೆ ಕಾರಣಾಂತರಗಳಿಂದಾಗಿ ಬೈಡೆನ್ ಸಮಾರಂಭದಲ್ಲಿ ಭಾಗಿಯಾಗಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರನ್ನು ಭಾರತ ಆಹ್ವಾನ ನೀಡಿತ್ತು. ಇನ್ನು ಬೈಡೆನ್ ಆಗಮನ ವೇಳೆ ಭಾರತವು ಕ್ವಾಡ್ (ಭಾರತ, ಅಮೆರಿಕಾ, ಆಸ್ಟ್ರೇಲಿಯಾ, ಜಪಾನ್) ಸಭೆಯನ್ನು ಕೂಡ ಆಯೋಜಿಸಿತ್ತು. ಆದರೆ ಬೈಡೆನ್ ಅನುಪಸ್ಥಿತಿಯಲ್ಲಿ ಸಭೆ ನಡೆದಿರಲಿಲ್ಲ. ಸದ್ಯ ಈ ಸಭೆಯನ್ನು ಅಮೆರಿಕಾದಲ್ಲಿನ ಅಧ್ಯಕ್ಷೀಯ ಚುನಾವಣೆಯ ಮುಗಿದ ಬಳಿಕ, ವರ್ಷಂತ್ಯದಲ್ಲಿ ಭಾರತದಲ್ಲೇ ಆಯೋಜಿಸಲಾಗುತ್ತಿದೆ. ಆದರೆ ಇದೀಗ ಕ್ವಾಡ್ ಮಟ್ಟದ ಎನ್‌ಎಸ್‌ಎ ಸಭೆಯು ಇದೇ ತಿಂಗಳ ೨೧ರಿಂದ ೨೩ರ ನಡುವೆ ದೆಹಲಿಯಲ್ಲಿ ನಡೆಯಲಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಭೆಯನ್ನು ಅಂತಿಮಗೊಳಿಸುವ ಅಂತಿಮ ಹಂತದ ಪ್ರಯತ್ನಗಳು ಭರದಿಂದ ಸಾಗಿವೆ. ಈ ಅವಧಿಯಲ್ಲಿ ಅಮೆರಿಕಾದ ಎನ್‌ಎಸ್‌ಎ ಜ್ಯಾಕ್ ಸುಲ್ಲಿವಾನ್ ಅವರು ಭಾರತದ ಎನ್‌ಎಸ್‌ಎ ಅಜಿತ್ ಧೋವಲ್ ಜೊತೆ ಮಹತ್ವಪೂರ್ಣ ಮಾತುಕತೆ ನಡೆಸಲಿದ್ದು, ಅದರಲ್ಲೂ ಮುಖ್ಯವಾಗಿ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ವಿಚಾರದಲ್ಲಿ ಬಹುಮುಖ್ಯ ಸಭೆ ನಡೆಯಲಿದೆ. ಐಸಿಇಟಿ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕಾ ಯಾವ ರೀತಿ ಜಂಟಿಯಾಗಿ ಸಹಭಾಗಿತ್ವ ಸಾಗಬಹುದು ಎಂಬ ಬಗ್ಗೆ ಚರ್ಚೆಯ ಭಾಗವಾಗಿರಲಿದೆ. ಅಲ್ಲದೆ ಭೇಟಿಯಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯತ್ನ ಪ್ರಕರಣವನ್ನು ಕೂಡ ಜ್ಯಾಕ್ ಸುಲ್ಲಿವಾನ್ ಅವರು ಭಾರತ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ತನಿಖೆ ಯಾವ ಮಟ್ಟದಲ್ಲಿ ಸಾಗುತ್ತಿದೆ ಎಂಬ ಕುರಿತು ಕೂಡ ಜ್ಯಾಕ್ ಹಾಗೂ ಅಜಿತ್ ನಡುವೆ ಚರ್ಚೆ ನಡೆಯುವ ಸಾಧ್ಯತೆ ಇದೆ.