ತಾ.ಪಂ. ಸದಸ್ಯರಿಂದ ಸಭೆ ಬಹಿಷ್ಕಾರ

ಬ್ಯಾಡಗಿ, ನ 22- ಅಂದಾಜು ಪತ್ರಿಕೆಯ ಅನುಸಾರ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಲಕ್ಷ್ಯ ತೋರಿರುವ ಕೆಆರ್’ಐಡಿಎಲ್ (ಭೂಸೇನಾ ನಿಗಮ) ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬ್ಯಾಡಗಿಯಲ್ಲಿ ತಾಲೂಕಾ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಘಟನೆ ಶನಿವಾರ ನಡೆದಿದೆ.
ಸ್ಥಳೀಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ಕರೆಯಲಾಗಿದ್ದ ತಾಲೂಕಾ ಪಂಚಾಯತ ಸರ್ವ ಸದಸ್ಯರ ಸಭೆಯ ಮುನ್ನ ತಾಲೂಕ ಪಂಚಾಯತಿಯ ನೂತನ ಕಟ್ಟಡದ ಸಮಸ್ಯೆಯು ಇತ್ಯರ್ಥವಾಗುವವರೆಗೂ ಯಾರೂ ಕೂಡಾ ಸಭೆಗೆ ಭಾಗವಹಿಸದೇ ದೂರವಿರುವ ಮೂಲಕ ಸಭೆಯನ್ನು ನಡೆಸದಂತೆ ಬಿಗಿಪಟ್ಟು ಹಿಡಿದಿದ್ದರು. ಈ ಹಂತದಲ್ಲಿ ತಾ.ಪಂ. ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಹಾಗೂ ಸರ್ವ ಸದಸ್ಯರನ್ನು ಸಭೆಯಲ್ಲಿ ಭಾಗವಹಿಸುವಂತೆ ಮನವೊಲಿಸಲು ಯತ್ನಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಯಕುಮಾರ ಅವರು ಸಫಲತೆಯನ್ನು ಕಾಣದೇ ಅನಿವಾರ್ಯವಾಗಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಪಟ್ಟಣದ ತಾಲೂಕಾ ಪಂಚಾಯತ ಆವರಣದಲ್ಲಿ ಒಂದು ಕೋಟಿ ರೂಗಳ ವೆಚ್ಚದಲ್ಲಿ ಕೆಆರ್’ಐಡಿಎಲ್ (ಭೂಸೇನಾ ನಿಗಮ) ವತಿಯಿಂದ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ಅಂದಾಜು ಪತ್ರಿಕೆಯಲ್ಲಿ ತಯಾರಿಸಿದ ಕ್ರಿಯಾ ಯೋಜನೆಯ ಅನುಸಾರ ಮಾಡದೇ ಇರುವುದು ಕಂಡು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ಪ್ರಕಾರ ಪೂರ್ಣಗೊಳಿಸಿ ಹಸ್ತಾಂತರ ಮಾಡಲು ತಿಳಿಸಿದ್ದೇವೆ. ಆದರೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯಿಂದಾಗಿ ತಾಲೂಕಾ ಪಂಚಾಯತ ಆಡಳಿತ ಮಂಡಳಿ ಬೇಸತ್ತು ಹೋಗಿದ್ದಾರೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
10 ದಿನದಲ್ಲಿ ಪೂರ್ಣ ಕಾಮಗಾರಿ..!!
ಅಂದಾಜು ಪತ್ರಿಕೆಯ ಅನುಸಾರ ಬಾಕಿ ಇರುವ ರಾಷ್ಟ್ರಧ್ವಜ ಕಟ್ಟೆ ನಿರ್ಮಾಣ, ಬೋರವೆಲ್ ಮತ್ತು ಮೋಟಾರ್ ಅಳವಡಿಕೆ ಸೇರಿದಂತೆ ಮೂರು ಕಾಮಗಾರಿಗಳನ್ನು ಮುಂದಿನ ಹತ್ತು ದಿನಗಳಲ್ಲಿ ಪೂರ್ಣಗೊಳಿಸಿ ಹಸ್ತಾಂತರ ಮಾಡುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಯಕುಮಾರ ಕೆಆರ್’ಐಡಿಎಲ್ ಇಂಜಿನಿಯರ್ ಮಹೆಂದ್ರಕರ್ ಅವರಿಗೆ ತಾಕೀತು ಮಾಡಿದರಲ್ಲದೆ ಕಟ್ಟಡ ಕಾಮಗಾರಿಯ ಸಂಪೂರ್ಣ ಪರಿಶೀಲನಾ ವರದಿಯನ್ನು ಸಲ್ಲಿಸಲು ಕ್ರಮ ವಹಿಸುವಂತೆ ನಿಯೋಜಿತ ಪಂಚಾಯತ ರಾಜ್ ತಾಂತ್ರಿಕ ಉಪವಿಭಾಗದ ಎಇಇ ಕಲ್ಲೊಳ್ಕರ್ ಅವರಿಗೆ ಸೂಚಿಸಿದರು.
ಕಾಯ್ದು ಸುಸ್ತಾದ ಅಧಿಕಾರಿಗಳು..!!
ಸಭೆಯಲ್ಲಿ ಪಾಲ್ಗೊಳ್ಳಲು 11 ಗಂಟೆಗೆ ಆಗಮಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕಾ ಪಂಚಾಯತ ಆಡಳಿತ ಮಂಡಳಿಯವರ ಸಭೆ ಬಹಿಷ್ಕಾರದ ಹಿನ್ನಲೆಯಲ್ಲಿ ಮಧ್ಯಾಹ್ನ ಒಂದು ಗಂಟೆಯಾದರೂ ಸಭೆಯು ಪ್ರಾರಂಭವಾಗುವ ಲಕ್ಷಣಗಳು ಕಾಣದೇ ಕಾಯ್ದು ಕುಳಿತುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು. ಕೊನೆಗೆ ಸಭೆಯನ್ನು ಮುಂದೂಡಿದ ಬಗ್ಗೆ ಮಾಹಿತಿ ಪಡೆದು ಹೊರ ನಡೆದರು.