ತಾ.ಪಂ: ವಾಣಿಜ್ಯ ಮಳಿಗೆಗಳ ಟಂಡರ್ ಸುತ್ತ ಅನುಮಾನದ ಹುತ್ತ

ಸಂಜೆವಾಣಿ ವಾರ್ತೆ
ಸಿಂಧನೂರು.ಫೆ.೦೭- ತಾಲೂಕು ಪಂಚಾಯತ ಸುಪರ್ದಿಯಲ್ಲಿರುವ ವಾಣಿಜ್ಯ ಮಳಿಗೆಗಳು ಕಳೆದ ಹತ್ತು ವರ್ಷಗಳು ಗತಿಸಿದರೂ ಮರು ಟೆಂಡರ್ ಕರೆಯದೇ ಹಳೆಯ ವ್ಯಾಪಾರಸ್ಥರು ಮುಂದುವರೆದಿದ್ದಾರೆ ಟೆಂಡರ್ ಸುತ್ತ ಅನುಮಾನದ ಹುತ್ತ ಹಬ್ಬಿದೆ.
ತಾಲೂಕು ಪಂಚಾಯತ ವ್ಯಾಪ್ತಿಯಲ್ಲಿ ಮೂವತ್ತು ವಾಣಿಜ್ಯ ಮಳಿಗೆಗಳಿದ್ದು ಮೂರೂ ವರ್ಷಕ್ಕೊಂದು ಟೆಂಡರ್ ಕರೆಯಬೇಕೆಂಬ ನಿಯಮವಿದ್ದರೂ ,ಹತ್ತು ವರ್ಷಗಳು ಕಳೆದರೂ ಇಲ್ಲಿಯವರೆಗೂ ಟೆಂಡರ್ ಕರೆಯದೇ ಈ ಹಿಂದೆ ಆದವರೇ ಈಗಲೂ ಮುಂದುವರಿದಿರುವುದು ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎ.ಡಿ ಅವರ ನಡೆಯ ಕುರಿತು ಅನುಮಾನ ಮೂಡಿದೆ ಈ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಬಣ) ತಾಲೂಕು ಅಧ್ಯಕ್ಷ ಸುರೇಶ ಗೊಬ್ಬರಕಲ್ ಆರೋಪಿಸಿದರು.
ಟೆಂಡರ್ ನಿಯಮಾವಳಿಗಳನ್ನು ಆಧರಿಸಿ ಮುಕ್ತ ಟೆಂಡರ್ ಕರೆಯಬೇಕಾಗಿದ್ದು, ಆ ನಿಯಮಗಳನ್ನು ಗಾಳಿಗೆ ತೂರಿ ಇಒ ಮತ್ತು ಎ.ಡಿ ಹಣದ ಆಮಿಷಕ್ಕೆ ಒಳಗಾಗಿ ಟೆಂಡರ್ ಕರೆಯದೇ ಮುಚ್ಚಿಟ್ಟಿದ್ದಾರೆ ಈ ಕುರಿತು ಟೆಂಡರ್ ಕರೆಯುವಂತೆ ಹಲವಾರು ಬಾರಿ ದೂರು ಸಲ್ಲಿಸಿದರೂ ಯಾವುದೇ ರೀತಿಯ ಟೆಂಡರ್ ಕರೆಯಲು ಮುಂದಾಗುತ್ತಿಲ್ಲ ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ರಾಯಚೂರು ಅವರಿಗೂ ದೂರನ್ನು ನೀಡಲಾಗಿದ್ದು, ಈ ಕುರಿತಂತೆ ತಾಲೂಕು ಪಂಚಾಯತ ಇ.ಒ ಮಳಿಗೆ ವ್ಯಾಪಾರಸ್ಥರು ಖಾಲಿ ಮಾಡಿ ತಾಲೂಕು ಪಂಚಾಯತ ಸ್ವಾಧೀನಕ್ಕೆ ಒಪ್ಪಿಸುವಂತೆ ನೋಟಿಸ್ ನೀಡಿದ್ದು ಬಿಟ್ಟರೆ ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ಗಳು ನಡೆದಿಲ್ಲ ಎಂದು ಆರೋಪಿಸಿದರು.
ಈ ಕುರಿತು ಕಾಲ ವಿಳಂಬ ಮಾಡಿದರ ತಾಲೂಕು ಪಂಚಾಯತ ಮುಂದೆ ಧರಣಿ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಸಿದರು.