ತಾಳಿ ತೆಗೆಸಿ ಹಿಂದೂಗಳ ಭಾವನೆ ಜೊತೆ ಚೆಲ್ಲಾಟ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ತೆಲ್ಕೂರ್ ಆಕ್ರೋಶ

ಕಲಬುರಗಿ:ನ.06: ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ಪರೀಕ್ಷೆ ನಡೆಯುತ್ತಿದ್ದು, ತಪಾಸಣೆಯ ನೆಪದಲ್ಲಿ ವಿವಾಹಿತ ಮಹಿಳೆಯರ ಸುಮಂಗಲಿಯ ಪ್ರತೀಕವಾದ ತಾಳಿ ತೆಗೆಸುತ್ತಿರುವುದನ್ನು ಗಮನಿಸಿದರೆ ರಾಜ್ಯದ ಸಿದ್ಧರಾಮಯ್ಯ ಅವರ ಸರ್ಕಾರ ಹಿಂದೂಗಳ ಭಾವನೆಯ ಜೊತೆ ಚೆಲ್ಲಾಟವಾಡುತ್ತಿದೆ ಎನಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಲೆಕ್ಕ ಸಹಾಯಕರ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳ ತಾಳಿಗೆ ರಿಯಾಯಿತಿ ಇದೆ. ಆದಾಗ್ಯೂ, ಉದ್ದೇಶಪೂರ್ವಕವಾಗಿ ಎಲ್ಲ ಹೆಣ್ಣು ಮಕ್ಕಳ ತಾಳಿ ಮತ್ತು ಕಾಲುಂಗರ ತೆಗೆಸಿರುವುದು ಖಂಡನಾರ್ಹ ಎಂದು ಅವರು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.
ಸಿದ್ಧರಾಮಯ್ಯ ಸರ್ಕಾರ ಹಿಂದೂ ವಿರೋಧಿಯಾಗಿದೆ. ಕುಂಕುಮ ಬಳಸಬೇಡಿ, ಅರಿಷಿಣ ಬಳಸಬೇಡಿ. ಹೀಗೆ ಒಟ್ಟಾರೆ ಹಿಂದೂಗಳ ಆಚರಣೆ, ಆಚಾರ, ವಿಚಾರಗಳ ವಿರುದ್ಧ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ನಿಂತಂತೆ ಕಾಣುತ್ತಿದೆ ಎಂದು ಅವರು ದೂಷಿಸಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಕಾರಣಕ್ಕೆ ತಪಾಸಣೆ ಮಾಡಲಿ, ತಪಾಸಣೆ ವೇಳೆ ಏನಾದರೂ ಇರುವುದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಕುರಿತು ನಿಗಾ ವಹಿಸಿ. ಆದಾಗ್ಯೂ, ಎಲ್ಲ ಮಹಿಳೆಯರಿಗೆ ತಾಳಿ, ಕಾಲುಂಗರ ತೆಗೆಸುವುದು ಇದು ಕಾಂಗ್ರೆಸ್ ಸರ್ಕಾರ ಹಿಂದುಗಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ ಅವರು, ಹೆಣ್ಣು ಮಕ್ಕಳು ತಾವು ಸುಮಂಗಲಿಯರು ಎನ್ನುವ ಸಂಕೇತದಲ್ಲಿ ಮಾಂಗಲ್ಯವನ್ನು ಧರಿಸುತ್ತಾರೆ. ತನ್ನ ಪತಿಯ ಆಯಸ್ಸು ವೃದ್ಧಿಸುವ ಶಕ್ತಿ ಮಂಗಳಸೂತ್ರಕ್ಕೆ ಇದೆ ಎನ್ನುವ ನಂಬಿಕೆ ಇದೆ. ಆದಾಗ್ಯೂ, ಅಂತಹ ತಾಳಿ ತೆಗೆಸಿರುವುದು ಅಕ್ಷಮ್ಯ ಅಪರಾಧ. ಇದರಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಮುಂದೆ ಇಂತಹ ಘಟನೆ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಚ್ಚೆತ್ತ ಅಧಿಕಾರಿಗಳಿಂದ ತಾಳಿ ವಾಪಸ್ಸು: ಕೆಪಿಎಸ್‍ಸಿ ಪರೀಕ್ಷಾ ಅಕ್ರಮ ತಡೆಗಟ್ಟುವ ಕ್ರಮವಾಗಿ ತಾಳಿ ಹಾಗೂ ಕಾಲುಂಗರ ತೆಗೆಸಿದ ವಿವಾದದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಾಳಿ ಹಾಗೂ ಕಾಲುಂಗುರ ತೆಗೆಸದಂತೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗ್ರೂಪ್ ಸಿ ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ತಾಳಿ, ಕಾಲುಂಗುರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಅಧಿಕಾರಿಗಳು ತೆಗೆಸಿದ್ದರು. ಆ ವೇಳೆ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಕಿವಿಓಲೆ ತೆಗೆಯಲು ಬರದಿದ್ದಾಗ ಚಿನ್ನದಂಗಡಿಗೆ ಹೋಗಿ ಮಹಿಳೆಯರು ತೆಗೆಸಿಕೊಂಡು ಬಂದಿದ್ದರು.
ರಾಯಚೂರು ಮೂಲದ ಇಬ್ಬರು ಮಹಿಳೆಯರಿಗೆ ಅಧಿಕಾರಿಗಳು ತೀವ್ರ ತಪಾಸಣೆ ಮಾಡಿ ತಾಳಿ ಹಾಗೂ ಕಾಲುಂಗುರ ತೆಗೆಯಲು ಹೇಳಿದ್ದರು. ಆ ವೇಳೆ ಅನಿವಾರ್ಯವಾಗಿ ಮಹಿಳೆಯರು ತೆಗೆದು ಸಂಬಂಧಿಕರ ಬಳಿ ನೀಡಿ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದರು. ಆ ಕುರಿತು ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳಕ್ಕೆ ತೆರಳಿ ತಾಳಿ, ಕಾಲುಂಗುರ, ಕಿವಿಯೋಲೆ ಮರಳಿಸುವಂತೆ ಸೂಚಿಸಿದರು.