ತಾಳಿಕೋಟೆ ಗ್ರಾಮದೇವತೆ ಜಾತ್ರೆ ಭಾರ ಎತ್ತುವ ಸ್ಪರ್ದೆ

ತಾಳಿಕೋಟೆ:ಜೂ.27: ಶ್ರೀ ಗ್ರಾಮದೇವತೆ ಜಾತ್ರೋತ್ಸವ ಅಂಗವಾಗಿ ಸೋಮವಾರರಂದು ರಾಜವಾಡೆಯಲ್ಲಿ ಭಾರ ಎತ್ತುವ ಸ್ಪರ್ದೆ ಏರ್ಪಡಿಸಲಾಗಿತ್ತು.

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ದೆಯಲ್ಲಿ ಸುಮಾರು 12 ಜನ ಸ್ಪರ್ದಾಳಿಗಳು ಭಾಗವಹಿಸಿದ್ದರಲ್ಲದೇ ಇವರಲ್ಲಿ ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಪ್ಜಲಖಾನ ಮುಜಾವರ ಎಂಬವರು 1 ಕ್ವಿಂಟಲ್ ಭಾರದ ಸಂಗ್ರಾಣಿ ಕಲ್ಲನ್ನು ಸಿಡಿ ಹೊಡೆಯುವ ಮೂಲಕ ಎತ್ತು ತೋರಿಸಿ ಪ್ರಥಮ ಭಹುಮಾನ ಪಡೆದರು.

ಅವರಂತೆ ಇದೇ ಸ್ಪರ್ದೆಯಲ್ಲಿ ಇಳಿದ ಲಿಂಗಸೂರಿನ ಉಮರ ಲಿಂಗಸೂರ ಎಂಬಾತ 69 ಕೆಜಿ ಭಾರದ ಸಂಗ್ರಾಣಿ ಕಲ್ಲು ಎತ್ತುವ ಮೂಲಕ ದ್ವಿತೀಯ ಭಹುಮಾನ ಪಡೆದರು.

ಈ ಭಹುಮಾನ ಪಡೆದ ಸ್ಪರ್ದಾಳುಗಳಿಗೆ ಭರಮಾನಂದ ಸುರಪೂರ ಅವರು ಪ್ರಥಮ ಭಹುಮಾನ ಪಡೆದ ಅಪ್ಜಲಖಾನ ಅವರಿಗೆ 11 ತೋಲೆ ಬೆಳ್ಳಿ ಕಡೆ, ದ್ವಿತೀಯ ಭಹುಮಾನ ಪಡೆದ ಉಮರ ಅವರಿಗೆ 8 ತೋಲೆ ಬೆಳ್ಳಿ ಕಡೆಯನ್ನು ನೀಡಿ ಪ್ರೋತ್ಸಾಹಿಸಿದರು.

ಅದರಂತೆ ಗುಂಡು ಎತ್ತುವ ಸ್ಪರ್ದೆಯಲ್ಲಿ ಸುಮಾರು 6 ಜನ ಸ್ಪರ್ದಾಳುಗಳು ಪಾಲ್ಗೊಂಡಿದ್ದರಲ್ಲದೇ ಅವರಲ್ಲಿ ಗುನ್ನಾಪೂರದ ಶಿವಲಿಂಗ ಶಿರೂರ ಎಂಬಾತ 184 ಕೆಜಿ ತೂಕದ ಗುಂಡನ್ನು ಎತ್ತಿ ಪ್ರಥಮ ಭಹುಮಾನ ಪಡೆದರೆ ದ್ವಿತೀಯ ಭಹುಮಾನವನ್ನು ಹಳ್ಳೂರಿನ ಚಂದ್ರಶೇಖರ ಯಾಳವಾರ ಅವರು 150 ಕೆಜಿ ತೂಕದ ಗುಂಡನ್ನು ಎತ್ತುವ ಮೂಲಕ ಪಡೆದುಕೊಂಡರು.

ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಈ ಇರ್ವ ಸ್ಪರ್ದಾಳುಗಳಿಗೆ ವಿಠ್ಠಲ ಮೋಹಿತೆ ಎಂಬವರು ಪ್ರಥಮವಾಗಿ 11 ತೋಲೆ ಬೆಳ್ಳಿ ಕಡೆ, ದ್ವಿತೀಯ ಭಹುಮಾನವಾಗಿ 8 ತೋಲೆ ಬೆಳ್ಳಿಕಡೆಯನ್ನು ನೀಡಿ ಪ್ರೋತ್ಸಾಹಿಸಿದರು. ಇದೇ ಸ್ಪರ್ದೆಯಲ್ಲಿ ಭಾಗವಹಿಸಿದ 12 ವರ್ಷದ ಬಾಲಕ ಉಸ್ಮಾನಗನಿ ಹಂಡೆಭಾಗ ಎಂಬಾತ 60 ಕೀಲೋ ತೂಕದ ಗುಂಡನ್ನು ಎತ್ತುವ ಮೂಲಕ ಜನರಿಗೆ ದಿಗ್ಬ್ರಮೆಗೊಳಿಸಿದರು. ಈ ಸಾದನೆಗೈದ ಬಾಲಕನಿಗೆ ಜಾತ್ರಾ ಕಮಿಟಿವತಿಯಿಂದ ಸನ್ಮಾನಿಸಿ ಗೌರವಿಸಿ ಕಾಣಿಕೆ ನೀಡಲಾಯಿತು.

ಅದರಂತೆ ಭಾರವಾದ ಜೋಳದ ಚೀಲ ಎತ್ತುವ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದ 4 ಜನ ಸ್ಪರ್ದಾಳುಗಳಲ್ಲಿ ಕುಂಟೋಜಿ ಗ್ರಾಮದ ಶ್ರೀಕಾಂತ ನಾಯಕ ಎಂಬವರು 2 ಕ್ವಿಂಟಲ್ 11 ಕೆಜಿ ತೂಕದ ಜೋಳದ ಚೀಲವನ್ನು ಎತ್ತಿ ಪ್ರಥಮ ಭಹುಮಾನ ಪಡೆದರೆ ದ್ವಿತೀಯ ಭಹುಮಾನವನ್ನು ಅಡವಿ ಸೋಮನಾಳದ ಭೀಮಣ್ಣ ಬಳಬಟ್ಟಿ ಅವರು 156 ಕೆಜಿ ತೂಕದ ಜೋಳದ ಚೀಲವನ್ನು ಎತ್ತಿ ದ್ವಿತೀಯ ಸ್ಥಾನವನ್ನು ಪಡೆದರು.

  ಪ್ರಥಮ ಭಹುಮಾನ ಪಡೆದ ಶ್ರೀಕಾಂತ ನಾಯಕ ಅವರಿಗೆ 21 ತೋಲೆ ಬೆಳ್ಳಿ ಕಡೆ ಹಾಗೂ ದ್ವಿತೀಯ ಭಹುಮಾನ ಪಡೆದ ಭೀಮಣ್ಣ ಬಳಬಟ್ಟಿ ಅವರಿಗೆ 11 ತೋಲೆ ಬೆಳ್ಳಿಕಡೆಯನ್ನು ಪ್ರಗತಿಪರ ರೈತರಾದ ಮಲ್ಲನಗೌಡ ಗೌಡಪ್ಪಗೌಡ ಪಾಟೀಲ ಅವರು ನೀಡಿ ಪ್ರೋತ್ಸಾಹಿಸಿದರು.

ಈ ಕಾರ್ಯಕ್ರಮವನ್ನು ಪ್ರವೀಣ್ ಪಾಟೀಲ ಅವರು ಸ್ವಾಗತಿಸುವ ಮೂಲಕ ನಡೆಸಿಕೊಟ್ಟರಲ್ಲದೇ ಕಾಶಿನಾಥ ಅಗ್ನಿ ಅವರು ನಿರೂಪಿಸಿ ವಂದಿಸಿದರು.

ಈ ಸಮಯದಲ್ಲಿ ಜಾತ್ರಾ ಕಮಿಟಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.